May 23, 2015

ಸೀತಾಪಹರಣ ಭಾಗ ೩

ಇಬ್ರೂ ಗಾಬರಿಯಿಂದ ಬೇಗ ಬೇಗ ಮನೆ ಹತ್ರ ಬಂದ್ರು. ಆದರೆ ಅಲ್ಲಿ ಸೀತೆ ಇರಲೇ ಇಲ್ಲ....... 



 ಅಜ್ಜಿ , ಈಗೇನ್ ಮಾಡಿದ್ರು ರಾಮ -ಲಕ್ಷ್ಮಣ?  ಅಲ್ಲಿ ಕಾಡಲ್ಲಿ ಪೊಲೀಸ್ ಸ್ಟೇಶನ್  ಇತ್ತ? ಕಂಪ್ಲೈಂಟ್ ಕೊಡೋಕೆ?
ಹುಡ್ಕೋದ್ ಹೇಗೆ ?  

ಅಜ್ಜಿ ಅಜ್ಜಿ, ಸೀತೆ ಹತ್ರ ಮೊಬೈಲ್ ಇರ್ಲಿಲ್ವಾ ?  ಅಪೂರ್ವಾ ಳ ಪ್ರಶ್ನೆ 

ಅಯ್ಯೋ , ಆಗ ಫೋನ್ ಕೂಡ ಇರ್ಲಿಲ್ಲ ಕಣೆ  ಇನ್ನು ಮೊಬೈಲ್ ಅಂತೆ  ಗೂಬೆ !  ಅಣ್ಣ ತಂಗಿಯ ತಲೆ ಮೇಲೊಂದು ಮೊಟಕಿದ . 

ಅಮ್ಮಾ .. ನೋಡು ಅಣ್ಣ ನಂಗೆ  ಗೂಬೆ ಅಂತಾನೆ .. ಅವ್ನೆ ಕೋತಿ !  ಅಪೂರ್ವಾಳ ರಾಗ ಶುರುವಾಗುವ ಲಕ್ಷಣ ಕಂಡು ಅಜ್ಜಿ ನಡುವೆ ಗದರಿದರು . 

ಈಗೇನ್ ಕತೆ ಕೇಳ್ತೀರಾ ಇಲ್ಲ ಕಿತ್ತಾಡ್ತೀರ? 

ಸಾರಿ ಅಜ್ಜಿ ,  ನೀನ್ ಹೇಳು . 

ಹ್ಮಂ.. ಆಗೆಲ್ಲ ಪೊಲೀಸ್ ಸ್ಟೇಶನ್ ಎಲ್ಲ ಏನು ಇರ್ಲಿಲ್ಲ . ಅದ್ಕೆ ರಾಮ ಲಕ್ಷ್ಮಣ ಇಬ್ರು ರಾವಣ ಕಾಡಲ್ಲಿ   ಯಾವ ದಿಕ್ಕಿಗೆ ಹೋಗಿರಬಹುದು  ಅಂದಾಜು ಮಾಡ್ಕೊಂಡು  ಹುಡುಕ್ತಾ ಹೊರಟರು . 

"ಅದ್ಕೆ ನೋಡು ಈಗ ಟೆಕ್ನಾಲಜಿ ಇಂದ ಎಷ್ಟು ಉಪಯೋಗ ಆಗಿದೆ ಅಂತ . ಯಾರು ಎಲ್ಲಿದ್ರೂ ಹುಡುಕಬಹುದು"  ವರುಣ್  ಹೇಳಿದ ಅಜ್ಜಿಗೆ . 

'ನಾನು  ನಿಮ್ ಕಾಲದ ಕಥೆ ಹೇಳ್ತಿಲ್ಲ ಸುಮ್ನೆ  ಕೇಳಿ' .  ಅಜ್ಜಿ ಗದರಿದರು . 

"ಸ್ವಲ್ಪ ದೂರ  ಹೋಗೋವಾಗ .. ಅಲ್ಲಿ ಒಂದು ದೊಡ್ಡ ಹಕ್ಕಿ ರೆಕ್ಕೆ ಎಲ್ಲ ಕತ್ತರಿಸ್ಕೊಂಡು ಬಿದ್ದಿತ್ತು  . ಅದನ್ನ ನೋಡಿ ಇವರಿಬ್ರು ಅದಕ್ಕೆ ಸ್ವಲ್ಪ ನೀರು ಕುಡಿಸಿ , ಏನಾಯ್ತು  ಯಾರು ಹೀಂಗೆ ಮಾಡಿದ್ದು ಅಂತ ಕೇಳಿದ್ರು . 
ಅದಕ್ಕೆ ಹಕ್ಕಿ , ಇವರನ್ನ ನೋಡಿ ಅದು  ರಾಮ- ಲಕ್ಷ್ಮಣ  ನೀವೇನಾ ಅಂತ ಕೇಳ್ತು . ಹೌದು ಅಂದಾಗ , ನಾನು ಜಟಾಯು ಅಂತ  , ಸ್ವಲ್ಪ ಹೊತ್ತು ಮುಂಚೆ , ಒಂದು ಚಂದದ ಹೆಂಗಸನ್ನು ರಾವಣ  ಪುಷ್ಪಕ ವಿಮಾನದಲ್ಲಿ ಕರ್ಕೊಂಡು ಹೋದ . ಅವಳು  ರಾಮಾ , ಲಕ್ಷ್ಮಣಾ ಕಾಪಾಡಿ ಅಂತ  ಜೋರಾಗಿ ಕೂಗ್ತಾ ಇದ್ಲು. ಅದಕ್ಕೆ ನಾನು  ಸಹಾಯ ಮಾಡೋಕೆ ಹೋದೆ ಆಗ ರಾವಣ ನನ್ನ  ರೆಕ್ಕೆನೆಲ್ಲ ಕತ್ತರಿಸಿ ಹಾಕ್ಬಿಟ್ಟ"  ಅಂತ ಹೇಳ್ತು. 

"ಅಜ್ಜಿ , ಹಕ್ಕಿಗೆ  ಮಾತಾಡೋಕೆ ಬರ್ತಾ ಇತ್ತ? ಅದಕ್ಕೆ ಹೆಸರು ಯಾರು ಇಟ್ಟಿದ್ರು ? ಯಾರಾದ್ರು ಸಾಕಿ ಕೊಂಡಿದ್ದಾ ಆ ಹಕ್ಕಿ ?"  -ಅಪೂರ್ವಾಳ ಪ್ರಶ್ನಾವಳಿ . 

"ಆಗಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆಲ್ಲ ಮಾತಾಡೋಕೆ ಬರ್ತಿತ್ತು . ಅದಕ್ಕೆ ಹೆಸರು   ಇರ್ತಾ ಇಟ್ಟು . ಅವುಗಳ ಅಪ್ಪ ಅಮ್ಮ ಇಡ್ತಾ ಇದ್ರೂ .  "

"  ಆದರೂ ಜಟಾಯು ಅನ್ನೋ ಹೆಸರು ಚೂರೂ ಚೆನಾಗಿಲ್ಲ ಬಿಡಜ್ಜಿ "

 "ರಾಮ ಲಕ್ಷ್ಮಣ  ಆ ಹಕ್ಕಿ ನ ಕೇಳಿದ್ರು , ಈ ರಾವಣ ಅಂದ್ರೆ ಯಾರು ? ಎಲ್ಲಿರ್ತಾನೆ  ನಿನ್ಗೆನಾದ್ರು ಗೊತ್ತಾ"  ಅಂತ 
 ಅಜ್ಜಿ ಮೊಮ್ಮಕ್ಕಳಿಗೆ ಮಾತಾಡುವ ಅವಕಾಶ ಕೊಡದೆ ಮುಂದುವರಿಸಿದರು . 

"ಜಟಾಯು ಹೇಳ್ತು , ಇಲ್ಲಿಂದ ಸುಮಾರು ದೂರ ಸಮುದ್ರದ ನಡುವೆ  ಒಂದು ತುಂಬಾ ಸುಂದರವಾಗಿರೋ  ಪಟ್ಟಣ ಇದೆ . ಲಂಕಾ ಪಟ್ಟಣ ಅಂತ ಅದರ ರಾಜ ಈ ರಾವಣ.
ಹೀಗೆ ಮುಂದೆ ಹೋದ್ರೆ , ಅಲ್ಲಿ  ಕಿಷ್ಕಿಂಧೆ ಅಂತ ಸಿಗತ್ತೆ  ಅಲ್ಲಿ ರಾಜ ಸುಗ್ರೀವನ್ನ ಭೇಟಿ ಮಾಡಿದ್ರೆ ನಿಮಗೆ ಸಹಾಯ ಸಿಗಬಹುದು"  ಅಂತ ಹೇಳಿ  ಜಟಾಯು ಸತ್ತೋಯ್ತು  . 

"ಪಾಪ ಅಲ್ವ ಅಜ್ಜಿ  ಜಟಾಯು ? ಗುರ್ತೆ ಇಲ್ದೆ ಹೋದ್ರು  ಸಹಾಯ ಮಾಡೋಕೆ ಹೋಗಿ ಸತ್ತೋಯ್ತು  ! "

"ಅದ್ಕೆ ಕಣೆ ಸುಮ್ ಸುಮ್ನೆ ಯಾರಿಗೂ ಹೆಲ್ಪ್ ಮಾಡೋಕ್ ಹೋಗಬಾರದು  ಅನ್ನೋದು !  " ಆದಿತ್ಯ  ತಂಗಿಗೆ  ಹೇಳಿದ . 

ಸುಮ್ಮನೆ  ಕತೆ ಕೇಳ್ತಾ ಇದ್ದ ವರುಣ್  ಕೈ ಮೇಲೆತ್ತಿದ . ಪ್ರಶ್ನೆ ಕೇಳೋಕೆ . 

"ಅಜ್ಜಿ , ರಾವಣ ಲಂಕಾ ಪಟ್ಟಣ ದವನು . ಅಂದ್ರೆ ಬೇರೆ ದೇಶದವನು . ಅವ್ನು ಹೆಂಗೆ   ಪಾಸ್ ಪೋರ್ಟ್ , ವೀಸ  ಇಲ್ದೆ ನೆ ಬಂದ? ವಿಮಾನದಲ್ಲಿ ಬೇರೆ ಬಂದಿದ್ದ ಅಂದ್ರೆ  ಸೆಕ್ಯೂರಿಟಿ  ಫೋರ್ಸ್ ನವರು ಏನು ಮಾಡ್ತಾ ಇದ್ರು ?  ಅವನ ವಿಮಾನ ನ ಯಾಕೆ ಟ್ರ್ಯಾಕ್ ಮಾಡ್ಲಿಲ್ಲ ? "

ಅಜ್ಜಿ ಅವಕ್ಕಾದರು !  

" ಅಯ್ಯೋ ..ಅಂದ್ರೆ ಆವಾಗಿಂದ ಹೀಗೆ  ನಮ್ ಕಥೆ ಅಂತಾಯ್ತು ! ಯಾರು ಯಾವ್ ಬಾರ್ಡರ್ ಇಂದ ಹೇಗ ಬೇಕಾದರೂ ಒಳಗೆ ನುಗ್ಗ ಬಹುದು  ಕಣೋ "  - ಆದಿತ್ಯನ ಸಮಜ್ಹಾಯಿಷಿ . 

ಹೋಗಿ ಹೋಗಿ ನಿಮಗೆ  ರಾಮಾಯಣ ಕಥೆ ಹೇಳೋಕೆ ಶುರು ಮಾಡಿದ್ನಲ್ಲ  ನನ್ ಬುದ್ಧಿ ಗಿಷ್ಟು  ! ಅಜ್ಜಿ ಬೈಕೊಂಡರು. 

"ಮುಂದೆ ಹೇಳು ಅಜ್ಜಿ ನೀನು . ಅವ್ರು ಕಿಷ್ಕಿಂಧೆ ಗೇ ಹೋದ್ರ? "

"ಹಾಂ . ಸುಮಾರು ದೂರ ನಡ್ಕೊಂಡು ಹೋದ ಮೇಲೆ  ಅವರಿಗೆ ಕಿಷ್ಕಿಂಧೆ  ಕಾಣಿಸ್ತು . ಕಿಷ್ಕಿಂಧೆ ಲಿ ಎಲ್ಲ ನಿಮ್ ತರದವ್ರೆ   ಇದ್ದಿದ್ರು  !  ಅದರ ರಾಜ ಸುಗ್ರೀವ ಅಂತ . "

" ಅಜ್ಜಿ , ನಮ್ ತರದವರು ಅಂದ್ರೆ? ಮಕ್ಕಳೇ ಇದ್ರಾ?  "

 "ಹಿ ಹಿ ಹಿ  .. ಇಲ್ಲ ಕಣೆ  ಬರೀ ಕೋತಿಗಳು ಅಂತ ಹೇಳಿದ್ದು "-- ಅಜ್ಜಿ ದೊಡ್ಡದಾಗಿ ನಕ್ಕರು 

ಅಜ್ಜೀ ........... ಮುಖ ತಿರುವಿದಳು ಅಪೂರ್ವ . 

ಅಷ್ಟರಲ್ಲಿ  ಒಳಗಿಂದ ಕರೆ ಬಂತು . ಊಟ ರೆಡಿ ಎಲ್ಲ ಬೇಗ ಬನ್ನಿ ಅಂತ . 

ಮಕ್ಕಳು  ಎದ್ದರು . "ಅಜ್ಜಿ ಬೇಗ ಊಟ ಮಾಡ್ಕೊಂಡ್ ಬರೋಣ . ಮತ್ತೆ ಹೇಳು "

 ನಡೀರಿ ಇವತ್ತಿಗೆ ಸಾಕು ಇಷ್ಟೇ.  ನಂಗೂ ನಿಮಗೆ ಕಥೆ ಹೇಳಿ ಸುಸ್ತಾಗ್ತಿದೆ . 
ನಾಳೆ ಮುಂದಿನ ಕಥೆ 

2 comments:

sunaath said...

ಪುರಾಣ ಕಥೆಗಳಿಗೆ ಆಧುನಿಕ ಬಾಲಕರ ಮನಸ್ಸು ಸ್ಪಂದಿಸುವ ಪರಿಯನ್ನು ತುಂಬ ಸ್ವಾರಸ್ಯಕರವಾಗಿ ಚಿತ್ರಿಸಿದ್ದೀರಿ!

Anonymous said...

ತುಂಬಾ ಸ್ವಾರಸ್ಯಕರವಾಗಿದೆ. ಮಕ್ಕಳ ಕಾಮೆಂಟ್ಸ್ ಅಂತೂ ಸೂಪರ್!
ಈ ಬ್ಲಾಗ್, ಈ ಕಥೆ ಓದಿ ತುಂಬಾ ಖುಷಿ ಅಯ್ತು. ರಾಮಾಯಣದ ಮುಂದಿನ ಕಂತಿಗೆ
ಕಾತುರದಿಂದ ಕಾಯುತ್ತಿರುವೆ..