February 28, 2012

ಹುಚ್ಚು ಹೊಳೆ ಬ್ಲಾಗೂ , ಬದರಿ -ಕೇದಾರವೂ !

ನನ್ನ ಬ್ಲಾಗ್ ಕೂಡ ಒಂಥರಾ ಬದರಿ -ಕೇದಾರ ಗಳ ಥರ ಆಗಿದೆ !

ಅಯ್ಯೋ ... ತಾನು  ಏನೋ ನಾಲ್ಕು ಬರಹಗಳನ್ನು ಬರೆದು ಬದಿಗಿಟ್ಟ ಲಡಕಾಸಿ ಬ್ಲಾಗಿಗೂ ಆ ಪವಿತ್ರ ಕ್ಷೇತ್ರಗಳಿಗೂ ಹೋಲಿಸ್ತಾ ಇದಾಳಲ್ಲ  ? ತಲೆ ಕೆಟ್ಟಿಲ್ಲ ತಾನೆ ಅಂತ  ಅಂದ್ಕೋಬೇಡಿ . ಹಾಗಲ್ಲ ನಾನು  ಹೇಳಿದ್ದು. ಹಿಮಾಲಯದ ಶಿಖರಗಳ ತುದಿಯಲ್ಲಿ ತಣ್ಣಗೆ ಕುಳಿತ  ಆ ಕ್ಷೇತ್ರಗಳು  ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆದಿರುತ್ತವೆ . ಒಮ್ಮೆ ಚಳಿಗಾಲ ಶುರು ಆಯ್ತಂದರೆ ಮುಂದಿನ ನಾಲ್ಕು ತಿಂಗಳು   ಹಿಮ ಸುರಿದು ದೇವಾಲಯಗಳು ಅಡಿ ದಪ್ಪದ ಹಿಮದಲ್ಲಿ ಹೂತುಹೋಗುತ್ತವೆ.  ಅಲ್ಲಿಗೆ ಹೋಗುವ ದಾರಿ ಮುಚ್ಚಿಯೇ ಬಿಟ್ಟಿರುತ್ತದೆ. ಮತ್ತೆ ಚಳಿ ಕಡಿಮೆ ಆಗಿ ಹಿಮ ಕರಗಲು ಮತ್ತೆರಡು ತಿಂಗಳು  ! ಭಕ್ತರು ಯಾರೂ ಹೋಗುವ ಪ್ರಶ್ನೆ ಯೇ ಇಲ್ಲ ! ಹಾಗಿದ್ದ ಮೇಲೆ  ದೇವರು ತಾನೊಬ್ಬನೇ ಅಲ್ಲಿ ಯಾಕೆ ಕುಳಿತಿರುತ್ತಾನೆ ಅಲ್ಲವೇ ? ದೇವರೂ ಕೂಡ ಗಂಟು ಮೂಟೆ ಕಟ್ಟಿಕೊಂಡು ಕೆಳಗಿಳಿದು  ತನಗೆಂದೇ ಮೀಸಲಿಟ್ಟ  ದೇವಸ್ಥಾನಗಳಲ್ಲಿ ಬೆಚ್ಚಗೆ ಕೂತು ಬಿಡ್ತಾನೆ .  ಹೀಗಾಗಿ ಆರು ತಿಂಗಳು ಬದರಿ- ಕೇದಾರದ ದೇವಸ್ಥಾನಗಳು  ಬಾಗಿಲು ಮುಚ್ಚಿಕೊಂಡಿರುತ್ತವೆ .  ಹಾಂ , ಇದೊಂದೇ ವಿಷಯಕ್ಕೆ ನಾನೂ ನನ್ನ ಬ್ಲಾಗನ್ನು ಹೋಲಿಸಿದ್ದು ! ಇತ್ತೀಚೆ ಬಾಗಿಲು ಮುಚ್ಚಿಕೊಂಡು  ನಾನೂ ಹಾಯಾಗಿ ಕೂತಿದೀನಿ ಅಂತ !

ಅದ್ಯಾಕೋ , ಬರೆಯೋ ಆಸಕ್ತಿ ನೇ ಕಳೆದು ಹೋಗಿದೆ ಅನ್ನೋ ತರ ! ಹೊಸ ವಿಷಯಗಳು ಹೊಳೆದು , ಹಾಂ , ಇದರ ಮೇಲೊಂದು ಬರಹ ಬರೀತೀನಿ  ಅಂದ್ಕೊಂಡು  ಶುರು ಮಾಡಿ  ಒಂದು ಪ್ಯಾರಾ ದಾಟುತ್ತಿದ್ದ ಹಾಗೆ .. ಮುಂದೆನೂ ಹೊಳೆಯೋದೆ ಇಲ್ಲ !  ಕೆಲವು ಸಲ  ಗಾಬರಿ ಆಗಿಬಿಡತ್ತೆ ! ನನ್ನ ಬರವಣಿಗೆಯ  ಸಾಮರ್ಥ್ಯ ಇಷ್ಟೇನಾ? ಮುಗಿದೇ ಹೋಯ್ತಾ ಅಂತ ! 
ನಮ್ಮನೆಯವರು ಹೇಳ್ತಾರೆ  " ಒಂಥರಾ  ಅಲೆಗಳ ಏರಿಳಿತ ಇದ್ದಂಗೆ ಕಣೆ  ! ಈಗ ಇಳಿತದ ಸಮಯ ಹಾಗಾಗಿ ನಿಂಗೆ  ಬರೆಯೋಕೆ ಆಗ್ತಿಲ್ವೇನೋ . ಸಲ್ಪ ದಿನಕ್ಕೆ ಸರಿ ಹೋಗತ್ತೆ ಬಿಡು "  ಅಂತ . ಆದರೆ  ಯಾಕೋ ಇಳಿತದ ಸಮಯವೇ  ಹೆಚ್ಚಾಗಿ ಬಿಟ್ಟಿದೆ ಅನಿಸ್ತಾ ಇದೆ !  ಹಾಗೆ ನೋಡಿದರೆ , ಬಹಳಷ್ಟು ಬ್ಲಾಗಗಳಲ್ಲಿ ಇದೆ ಕಥೆ ಅಂತ ಗಮನಿಸಿದೀನಿ . ಅದು  ಸ್ವಲ್ಪ ಸಮಾಧಾನ . ಮನುಷ್ಯನ ಸ್ವಭಾವ ನೋಡಿ ! ನಮ್ಮ ಮನೆಲಿ ಕರೆಂಟ್ ಹೋಯ್ತು ಅಂದ್ರೆ  ಮೊದಲು ಕಿಡಕಿಯ ಆಚೆ  ಇಣುಕಿ ನೋಡ್ತೀವಿ . ಪಕ್ಕದ  ಮನೇಲೂ  ಇಲ್ಲ ಅಂದ್ರೆ ಮಾತ್ರ ಕೊಂಚ ಸಮಾಧಾನ !! ಹಾಗೆ ಇದೂ .

ಹ್ಮ್ಮ್ 
ಎಲ್ಲಿ ನೋಡಿದರೂ ಧೂಳು , ಮೂಲೆ ಮೂಲೆಯಲ್ಲಿ ಕಟ್ಟಿದ ಬಲೆ  ಛೆ ! ಇದನ್ನೆಲ್ಲಾ ಚೊಕ್ಕಗೊಳಿಸಲು ತುಂಬಾ ದಿನ ಬೇಕು. ಅಷ್ಟೆಲ್ಲ ಟೈಮ್ ಇಲ್ಲ . ಸ್ವಲ್ಪ  ಗುಡಿಸಿ  ನೆಲ ತೊಳೆದು ಬಣ್ಣದ ರಂಗೋಲಿ ಹಾಕೋಣ ಅಂದ್ರೆ  ಅಷ್ಟು ಸುಲಭ ಅನಿಸ್ತಾ ಇಲ್ಲ. ಗುಡಿಸೋಕೆ ಪೊರಕೆ ಕಾಣ್ತಿಲ್ಲ. ಬೇಸಿಗೆ ಬಂತಲ್ವಾ? ನಲ್ಲಿ ಲಿ ನೀರು ಬರ್ತಿಲ್ಲ ಇನ್ನು ತೊಳೆಯೋದು ಹೇಗೆ ?  ಬಣ್ಣಗಳೆಲ್ಲ ಕಲಸಿ ವಿಚಿತ್ರವಾಗಿವೆ.  ರಂಗೋಲಿಗೆ ತುಂಬಲು ಬಣ್ಣ ವೆ ಇಲ್ಲ . ಆದರೂ ಇವತ್ತು ಅಲ್ಪ ಸಲ್ಪವಾದರೂ ಸ್ವಚ್ಚಗೊಳಿಸಿ  ಒಂದು ಪುಟ್ಟ ರಂಗೋಲಿಯನ್ನು ಹಾಕೋಣ ಅಂದ್ಕೊಂಡಿದೀನಿ. ಬರೀ ಬಿಳಿಯ ರಂಗೋಲಿ ಪುಡಿ ಇದ್ದರೂ ಸಾಕು ಬಿಡಿ. ಯಾರಾದ್ರು ಬಂದು  ಇಣುಕಿದಾಗ ಒಂಚೂರಾದರೂ ನೋಡೋ  ಹಾಗೆ ಇಲ್ಲದಿದ್ರೆ ಏನು ಚೆನ್ನ ? ಎಂದೂ ಇಲ್ಲದ್ದು  ಇವತ್ತು ಯಾಕೆ ಇಷ್ಟೆಲ್ಲಾ ಧಾವಂತ / ಆಸಕ್ತಿ ಅಂತೀರಾ ?  ಹ್ಞೂ , ಯಾಕೆಂದ್ರೆ ಹುಟ್ಟು ಹಬ್ಬ  ನೋಡಿ ! ಈ ದಿನ ಆದ್ರೂ ಸ್ವಲ್ಪ ಚಂದ ಕಾಣಿಸ ಬೇಕಲ್ವಾ? 

13 comments:

shivu.k said...

ಚಿತ್ರಾ,
ನಿಮ್ಮ ಕತೆಯಂತೆಯೇ ನನ್ನದಾದರೂ ಸ್ವಲ್ಪ ವಿಭಿನ್ನವಾದದ್ದು. ಬರೆಯಲು ತಲೆಯಲ್ಲಿ ವಿಚಾರಗಳಿದ್ದರೂ ಕುಳಿತು ಬರೆಯಲಾಗುತ್ತಿಲ್ಲ. ಬರೆಯುವ ಹೆಡ್ಡಿಂಗ್ ಹತ್ತಾರು ಹಾಕಿದ್ದೇನೆ. ಹತ್ತಾರು ಸಾಲುಗಳು ಮುಗಿದಿವೆ. ಆದ್ರೂ ಮುಂದುವರಿಯದಿರಲು ಮನೆ ಬದಲಾಯಿಸುವುದು, ಕೆಲಸದ ಒತ್ತಡ....ಇದೆಲ್ಲಾ ಮುಗಿದು ಒಮ್ಮೆ ಪಟ್ಟಾಗಿ ಕುಳಿತರೆ ಚೆನ್ನಾಗಿ ಬರೆಯುತ್ತೇನೇನೋ ನಂಬಿಕೆ ಮನದೊಳಗೆ ಇದೆಯಲ್ಲಾ...ನಿಮಗೂ ಹಾಗೆ ಅನ್ನಿಸುತ್ತಿರಬಹುದು ಅಂದುಕೊಳ್ಳುತ್ತೇನೆ. ಏನಂತೀರಿ..

ಚುಕ್ಕಿಚಿತ್ತಾರ said...

ಹ್ಹ..ಹ್ಹಾ..ಚಿತ್ರಾ..
ನ೦ದೂ ನಿ೦ದೂ ಒ೦ದೇಕಥೆ...:))
ನಿ೦ದು ಹುಚ್ಚು ಹೊಳೆ ಆದ್ದರಿ೦ದ ಅದಕೆ ಮನಸ್ಸಿಗೆ ಬ೦ದ೦ತೆಯೇ ಅಲ್ಲವೇ ಲಹರಿ ಹರಿಯಲು ತೊಡಗುವುದು..!
ಹ್ಯಾಪ್ಪಿ ಬರ್ತಡೆ..:))
ಮು೦ದಿನ ಹ್ಯಾಪ್ಪಿ ಬರ್ತಡೆ ವರೆಗೆ ಕೆಲವಾರು ಹನಿ ಹಳ್ಳವಾಗಲಿ ....

ಸುಮ said...

ನನ್ನ ಬ್ಲಾಗ್ ಕಥೆಯೂ ಒಮ್ಮೊಮ್ಮೆ ಹೀಗೇ ಅಗುತ್ತೆ :) :)
ಬರವಣಿಗೆಯ ಇಳಿತ ಕಾಲ ಬೇಗ ಕಳೆಯಲಿ ಅಂತ ಹಾರೈಕೆ .ಹುಟ್ಟುಹಬ್ಬದ ಶುಭಾಶಯಗಳು.

sunaath said...

ಮೊದಲನೆಯದಾಗಿ ಹುಟ್ಟುಹಬ್ಬದ ಶುಭಾಶಯಗಳು. ಎರಡನೆಯದಾಗಿ, ಬದರಿನಾಥ,ಕೇದಾರನಾಥರು ವರ್ಷದಲ್ಲಿ ಒಂದೇ ತಿಂಗಳು ಕಂಡರೂ ಸಹ ಭಕ್ತರು ಕಾಯ್ತಾ ಇರ್ತಾರೆ, ನಾವು ನಿಮ್ಮ blogಗಾಗಿ ಕಾಯುವಂತೆ!

ಸುಧೇಶ್ ಶೆಟ್ಟಿ said...

ಹೋ... ಹುಟ್ಟಿದ ಹಬ್ಬಾನ! ನಿಮ್ಮ ಬ್ಲಾಗಿನ ಹುಟ್ಟಿದ ಹಬ್ಬ ನನಗೆ ಟೆನ್ಶನ್ ಕೊಡ್ತಿದೆ ಚಿತ್ರಾ. ಯಾಕೆಂದರೆ ನಿಮ್ಮ ಬ್ಲಾಗಿನ ಹುಟ್ಟಿದ ಹಬ್ಬದ ನಾಲ್ಕು ದಿನಕ್ಕೆ ನನ್ನ ಬ್ಲಾಗಿನ ಹುಟ್ಟಿದ ಹಬ್ಬ.. ನಾನು ಆರು
ತಿಂಗಳಿಂದ ಬ್ಲಾಗಿನ ಬಾಗಿಲು ಮುಚ್ಚಿ ಕೂತಿದೀನಿ :(

ಇನ್ನು ಮೇಲಾದರೂ ನಿಮ್ಮ ಬ್ಲಾಗ್ ಬರಹಗಳಿಂದ ನಳನಳಿಸುತ್ತಿರಲಿ ಎ೦ದು ಹಾರೈಸ್ತೀನಿ :)

ಸುಧೇಶ್ ಶೆಟ್ಟಿ said...

ಹೋ... ಹುಟ್ಟಿದ ಹಬ್ಬಾನ! ನಿಮ್ಮ ಬ್ಲಾಗಿನ ಹುಟ್ಟಿದ ಹಬ್ಬ ನನಗೆ ಟೆನ್ಶನ್ ಕೊಡ್ತಿದೆ ಚಿತ್ರಾ. ಯಾಕೆಂದರೆ ನಿಮ್ಮ ಬ್ಲಾಗಿನ ಹುಟ್ಟಿದ ಹಬ್ಬದ ನಾಲ್ಕು ದಿನಕ್ಕೆ ನನ್ನ ಬ್ಲಾಗಿನ ಹುಟ್ಟಿದ ಹಬ್ಬ.. ನಾನು ಆರು
ತಿಂಗಳಿಂದ ಬ್ಲಾಗಿನ ಬಾಗಿಲು ಮುಚ್ಚಿ ಕೂತಿದೀನಿ :(

ಇನ್ನು ಮೇಲಾದರೂ ನಿಮ್ಮ ಬ್ಲಾಗ್ ಬರಹಗಳಿಂದ ನಳನಳಿಸುತ್ತಿರಲಿ ಎ೦ದು ಹಾರೈಸ್ತೀನಿ :)

ಜಲನಯನ said...

ಆದರೆ ಚಿತ್ರಾ ನನ್ನ ಮನೆ ನಿನ್ನ ಕಿಟಕಿಯಿಂದ ಕಾಣೊಲ್ಲ ಅಂತ ಈಗ ಖಾತ್ರಿ ಮಾಡ್ಕೊಂಡೆ...ಯಾಕಂದ್ರೆ ನನ್ನ ಬ್ಲಾಗ್ ಗೆ ನೀನು ಬರೋದೇ ಅಪ್ರೂಪ....ಅದಕ್ಕೇ...
ಅಂತೂ ಬರೆದು ನೀನು ಬ್ಲಾಗು ಲೇಖ್ನ
ಹೀಗೇ ಒಮ್ಮೆ ನನಸಲಿ
ಅನ್ನಲಾ..?? ಗುಡ್ ಅಂತೂ ಬರೆದೆ...

Harisha - ಹರೀಶ said...

ಎಲ್ಲರ ಮನೆ ದೋಸೆನೂ ತೂತೆ.. ಎಲ್ಲರ ಬ್ಲಾಗೂ ಈಗೀಗ ಬಂದೇ :)

ತೇಜಸ್ವಿನಿ ಹೆಗಡೆ said...

ಸ್ಸಾರಿ ಅಕ್ಕಾ.. ಲೇಟಾಗಿ ಬಂದಿ ಪಾರ್ಟಿಗೆ..:( ನಂಗೆ ಚೊಕ್ಲೇಟ್, ಕೇಕ್ ಎಲ್ಲಾ ಸಿಗದಿಲ್ಯೇನೋ.. ಅಲ್ದಾ? ಹೋಗ್ಲಿ ಬಿಡು.. ನಿನ್ನ ಬ್ಲಾಗ್ ಮರಿ ತುಂಬಾ ಒಳ್ಳೊಳ್ಳೆ ಬರಹ ಕೊಡ್ತು.. ಅದ್ನಾ ಹೀಂಗೆ ಮುಂದೆ ಬೆಳ್ಸಿಕೊಂಡು ಹೋಗು... :) ಹ್ಯಾಪ್ಪಿ ಬ್ಲಾಗ್ ಬರ್ತ್‌ಡೇ :)

ಚಿತ್ರಾ said...

ನಿಮ್ಮೆಲ್ಲರ ಶುಭಾಶಯಗಳಿಗೆ , ಮನದಾಳದ ಧನ್ಯವಾದಗಳು !
ನಿಧಾನವಾಗಿಯಾದರೂ ಸರಿಯೇ , ಹೊಳೆ ಹರಿಯುತ್ತಿರುವಂತೆ ನೋಡಿಕೊಳ್ಳುವುದು ನನ್ನ ಆಶಯ .
ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ !

ಚಿತ್ರಾ said...

ಸುನಾಥ್ ಕಾಕಾ ,

ನೀವು ಹಿರಿಯರು .. ನನ್ನ ಬ್ಲಾಗಿಗೆ ಕಾಯುತ್ತಿರುತ್ತೇವೆ ಎಂದು ಹೇಳಿ ನನ್ನನ್ನು ಮೂಕಳಾಗಿಸಿದ್ದೀರಿ.
ನಿಮ್ಮ ಪ್ರೀತಿಗೆ , ಅಭಿಮಾನಕ್ಕೆ ಸದಾ ಋಣಿ !

ಮನಸ್ವಿ said...

ಬ್ಲಾಗ್ ಹುಟ್ಟಿದ ಹಬ್ಬದ ಶುಭಾಶಯಗಳು, ನಾನು ಬ್ಲಾಗ್ ನ ಹುಟ್ಟಿದ ಹಬ್ಬವನ್ನು ಆಚರಿಸಿಯೇ ಇಲ್ಲ, ಹುಟ್ಟಿದ ದಿನ ನೆನಪೇ ಇಲ್ಲವಾ ಅನ್ನಿಸುತ್ತೆ, ಬ್ಲಾಗ್ ಆರಂಭಿಸಿದ್ದೇ ಬೇರೆ ದಿನ ಮೊದಲ ಪೋಸ್ಟ್ ಯಾವತ್ತೋ ಮಾಡಿದ್ದೆ, ಅದೇ ಅದರ ಹುಟ್ಟಿದ ದಿನವಾ? :) ಈಗೀಗ ಎಲ್ಲಾ ಬ್ಲಾಗ್ ಗಳ ಪರಿಸ್ಥಿತಿ ಹಾಗೇ ಇದೆ ಅನ್ನಿಸುತ್ತೆ, ಅದ್ಯಾಕೋ ಗೊತ್ತಿಲ್ಲೆ, ಬರಿಬೇಕು ಅಂದ್ರೂ ಬರೆಯೋದಿಕ್ಕೆ ಆಗೋಲ್ಲ, ನನ್ನ ಬ್ಲಾಗನ್ನು ಹಾಗೇ ಸುಮ್ಮನೆ ಬಿಟ್ಟು ತುಂಬಾ ತಿಂಗಳುಗಳೇ ಕಳೆದು ಹೋಗಿವೆ... ಬರಿಬೇಕು ಏನನ್ನಾದರೂ........... ನಾನು ಸಹ ಬದರಿ ಕೇದಾರನಾಥದ ತರ ನಿನ್ನ ಬ್ಲಾಗ್ ಬಾಗಿಲಲ್ಲೆ ನಿಂತು ಕಾಯ್ತಾ ಇದೀನಿ ಯಾವಾಗ ಬಾಗಿಲು ತೆರೆಯುತ್ತೆ ಅಂತ...

prashasti said...

ಮೇಲಿರೋ ಟಾಪ್ ೪ ಕಾಮೆಂಟಿಗರೂ (ಬ್ಲಾಗಿಗರು :-) :-) ) ತಮ್ಮ ಬ್ಲಾಗ್ ದುಸ್ಥಿತಿಯ ಬಗ್ಗೆ ಹೇಳಿದ್ದಾರೆ.. ಹಳಬರದ್ದೇ ಈ ಕತೆಯಾದರೆ ನಮ್ಮಂತ ಹೊಸಬರ ಕತೆ ಏನು ಬೇರೆ ಅಲ್ಲ :-) ನೀವೇ ಹೇಳಿದಂತೆ ಬರೆಯೋ ಭಾವ ಅನ್ನೋದು ಒಂತರಾ ಅಲೆ ಇದ್ದಂತಗೆ ಇರ್ಬೋದೇನೋ. ಕೆಲೋ ಸಲ ಉಚ್ಛ್ ಸ್ಥಿತಿಲಿದ್ರೆ, ಕೆಲೋ ಸಲ ಪಾತಾಳಕ್ಕಿಳಿದಿರುತ್ತೆ. ಕೆಲೋ ಸಲ ಯಾಕಾರೂ ಬರಿಬೇಕೋ.. ಸುಮ್ನೆ ನಂ ಪಾಡಿಗೆ ಇದ್ದು ಬಿಡ್ಬೋದಲ್ವಾ ಅಂತ ಅನಿಸೋದೂ ಇದೆ...ಆದರೂ ಬೇಸಿಗೇಲಿ ಮಳೆ ಬಂದಂಗೆ ಅಲ್ಲೊಂದು ಇಲ್ಲೊಂದು ವಿಚಾರಗಳು ಪಟ್ಟು ಬಿಡದೇ ಬರೆಸಿ ಬಿಡುತ್ತದೆ.. ನಿಮ್ಮೀ ಬ್ಲಾಗೂ, ಲೇಖನ ಓದಿ ಖುಶಿ ಆಯ್ತು.
ಬಹಳ ತಡವಾಗಿ ಹುಟ್ಟಿದಬ್ಬದ ಶುಭಾಶಯಗಳು :-)