September 26, 2010

ಗಣಪತಿ ಬಪ್ಪಾ .... ಮೋರಯಾ

 ಪುಣೆಯ ಗಣೇಶೋತ್ಸವದ್ದೆ ಒಂದು ವೈಭವವಾದರೆ , ಗಣಪತಿ ವಿಸರ್ಜನೆ ಇನ್ನೊಂದು ಸಂಭ್ರಮ ! ದಿನಗಟ್ಟಲೆ ನಡೆಯುವ ಮೆರವಣಿಗೆಯನ್ನು ನೋಡುವುದೇ ಒಂದು ಹಬ್ಬ ! ಗಣಪತಿ ಕೂರಿಸುವ ಮಂಟಪಕ್ಕಿಂತ ಹೆಚ್ಚು ಹಣ, ವಿಸರ್ಜನೆಯ ದಿನದ ಮೆರವಣಿಗೆಗೆ ಖರ್ಚಾಗುತ್ತದೆ. ಲಕ್ಷಗಟ್ಟಲೆ ರೂಪಾಯಿಗಳನ್ನ ಮೆರವಣಿಗೆಯ ರಥಕ್ಕೆ ಖರ್ಚು ಮಾಡಲಾಗುತ್ತದೆ !


ಸಲ  ಪುಣೆ  ನಗರದಲ್ಲಿ ಅಧಿಕೃತವಾಗಿ ಗಣಪತಿ ಕೂರಿಸಿದ ಮಂಡಲ ಗಳು ೩೩೦೦ ಕ್ಕೂ ಹೆಚ್ಚು. ಅವುಗಳಲ್ಲಿ ೨೮೦೦ ಕ್ಕೂ ಹೆಚ್ಹು ಗಣಪತಿಗಳ ವಿಸರ್ಜನೆ ಅನಂತ ಚತುರ್ದಶಿಯಂದು ಆಗಿದೆ. ವಿಸರ್ಜನೆ ಪೂರ್ಣಗೊಳ್ಳಲು ಹಿಡಿದ ಸಮಯ ೨೭ ಗಂಟೆಗೂ ಮೀರಿದೆ ! ( ಕೆಲ ವರ್ಷಗಳ ಹಿಂದೆ ಸುಮಾರು ೩೮ ಗಂಟೆಗಳ ಕಾಲ ಮೆರವಣಿಗೆ ನಡೆದಿತ್ತು ! )


ಅನಂತ ಚತುರ್ದಶಿ ಸಮೀಪಿಸುತ್ತಿದ್ದಂತೆ ಮಂಡಲಗಳ ಉತ್ಸಾಹ, ಚಟುವಟಿಕೆ ಹೆಚ್ಚುತ್ತದೆ . ದೊಡ್ಡ ದೊಡ್ಡ ಲಾರಿಗಳು , ಟ್ರಾಕ್ಟರ್ ಗಳನ್ನು ಅಲ್ಪ ಸಲ್ಪ ಮಾರ್ಪಡಿಸಿ, ವಿಧವಿಧವಾಗಿ ಅಲಂಕರಿಸಿ ಮೆರವಣಿಗೆಗೆ ತಯಾರಿ ನಡೆಸಲಾಗುತ್ತದೆ . ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಾಗುವ ದೃಶ್ಯಾವಳಿ ಗಳಂತೆಯೇ ಇಲ್ಲೂ. ಯಾವುದೋ ಪೌರಾಣಿಕ ಕಥಾನಕದ ಭಾಗ, ಸಾಮಾಜಿಕ ಕಳಕಳಿ ತೋರುವ ರೂಪಕ , ಜಾನಪದ ಕಥೆಯ ಭಾಗ .. ಹೀಗೇ , ಒಂದೆರಡಲ್ಲ ! ಜೊತೆಗೆ , ಮೆರವಣಿಗೆಯ ಅಲಂಕೃತ ವಾಹನದ ಮುಂದೆ , ಡೋಲು , ತಮ್ಮಟೆ, ತಾಳ ಇತ್ಯಾದಿಗಳೊಂದಿಗೆ ಸಮವಸ್ತ್ರ ಧರಿಸಿ ಲಯಬದ್ಧವಾಗಿ ಕುಣಿಯುವ ಕಾರ್ಯ ಕರ್ತರು , ಕೆಲವೊಮ್ಮೆ ಅದಕ್ಕೆಂದೇ ವಿಶೇಷವಾಗಿ ಕರೆಸಿದ ನಿಪುಣ ಕಲಾವಿದರು ಕಳೆಯೇರಿಸುತ್ತಾರೆ . ಜೊತೆಗೆ ಅತಿ ಉತ್ಸಾಹದಿಂದ ಭಾಗವಹಿಸಿ , ಹೆಜ್ಜೆ ಸೇರಿಸಲು ಪ್ರಯತ್ನಿಸುವ ಉತ್ಸಾಹಿಗಳಿಗಂತೂ ಬರವೇ ಇಲ್ಲ ! ಯುವಕರಷ್ಟೇ ಅಲ್ಲದೆ, ಯುವತಿಯರೂ , mahಕೂಡ ಸಂಭ್ರಮದಲ್ಲಿ ಮನಃ ಪೂರ್ವಕವಾಗಿ ಪಾಲ್ಗೊಳ್ಳುತ್ತಾರೆ . ಮೆರವಣಿಗೆ ಕಿವಿಗೆ ಕಷ್ಟವೆನಿಸಿದರೂ , ನಯನ ಮನೋಹರ ಎನ್ನುವುದರಲ್ಲಿ ಎರಡು ಮಾತಿಲ್ಲ ! ದೊಡ್ಡ ದೊಡ್ಡ ಮಂಡಲ ಗಳು ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ವಾಹನಗಳನ್ನು ಅಲಂಕರಿಸುತ್ತವೆ . ಮೆರವಣಿಗೆಗೆ ನಿಗದಿ ಪಡಿಸಿದ ದಾರಿಯಲ್ಲಿ ತೋರಣಗಳು , ವಿದ್ಯುದ್ದೀಪಗಳು , ಬಣ್ಣ ಬಣ್ಣದ ಆಕರ್ಷಕ ರಂಗೋಲಿಗಳು ..... ನೋಡುವವರ ಮನಸ್ಸನ್ನು ಸೂರೆಗೊಳ್ಳುತ್ತವೆ .

ಸಾವಿರಾರು ಗಣೇಶ ಮಂಡಲ ಗಳು ಹತ್ತು ದಿನದ ಅವಧಿಯಲ್ಲಿ ನಗರದ ಚಿತ್ರಣವನ್ನೇ ಬದಲಾಯಿಸಿಬಿಡುತ್ತವೆ. ಸಂಜೆಯಾಗುತ್ತಿದ್ದಂತೆ , ದೀಪಾಲಂಕಾರ , ದೃಶ್ಯ ರೂಪಕಗಳು, ಅಬ್ಬರದ ಸಂಗೀತಗಳ ನಡುವೆ ಲಕ್ಷಗಟ್ಟಲೆ ಜನರು ಪುಣೆ ನಗರದ ಗಣಪತಿಗಳ ದರ್ಶನ ಪಡೆಯುತ್ತಾರೆ. ಅದೆಷ್ಟೋ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ವಿಸರ್ಜನೆಯ ದಿನ ಪುಣೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ಮಂಡಲಗಳಿಗೆ ಕ್ರಮಾಂಕವಿದೆ . ಅವರು ಪ್ರಕಾರವೇ ಮುಂದುವರೆಯಬೇಕು. ಉದಾ: ಪ್ರತಿಷ್ಟಿತ ಮಂಡಲ ಗಳಾದ ಕಸಬಾ ಗಣಪತಿ ( 1893) , ( ಇದು ಗ್ರಾಮ ದೇವತೆ) , ತಾಂಬಡಿ ಜೋಗೇಶ್ವರಿ ಗಣಪತಿ ( 1893) , ಗುರುಜಿ ತಾಲೀಮ್ ಗಣಪತಿ ( 1887 ) , ತುಳಸಿ ಬಾಗ್ ಗಣಪತಿ ( 1901 ) ಮತ್ತು ಕೇಸರಿ ವಾಡಾ ಗಣಪತಿ ( 1893 ) ಗಣಪತಿಗಳಿಗೆ ಇದೇ ಸರದಿಯಲ್ಲಿ ಮೊದಲ ಆದ್ಯತೆ ! ನೂರಕ್ಕೂ ಹೆಚ್ಚು ವರ್ಷಗಳಿಂದ ಉತ್ಸವವನ್ನು ಅದೇ ವಿಜೃಂಭಣೆಯಿಂದ ನಡೆಸಿಕೊಂಡು ಬಂದ ಕೀರ್ತಿ ಇವುಗಳದ್ದು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ , ಮಾನ್ಯ ತಿಲಕರು ಹಿಂದೂಗಳನ್ನು ಒಂದುಗೂಡಿಸುವ ವೇದಿಕೆಯಾಗಿ ಸ್ಥಾಪಿಸಿದ ಸಾರ್ವಜನಿಕ ಗಣೇಶ ಮಂಡಲ ಗಳು ಇಂದಿಗೂ ಸಹ ಅದೇ ನಿಷ್ಥೆಯಿಂದ ಕಾರ್ಯವಹಿಸುತ್ತಿವೆ. ಇವಲ್ಲದೆ , ಅಖಿಲ ಮಂಡಯಿ ( ತರಕಾರಿ ಮಾರುಕಟ್ಟೆ) ಗಣಪತಿ, ಹುತಾತ್ಮಾ ಬಾಬು ಗೇಣು ಮಂಡಲ , ಜಿಲೆಬ್ಯಾ ಮಾರುತಿ ಇತ್ಯಾದಿ ಗಣಪತಿಗಳು ತುಂಬಾ ಪ್ರಸಿದ್ಧವಾಗಿವೆ .


          ಕಸಬಾ ಗಣಪತಿ                                ತಾಂಬಡಿ ಜೋಗೇಶ್ವರಿ                       ಗುರುಜಿ ತಾಲೀಮ್




         ತುಳಸಿ ಬಾಗ್ ಗಣಪ                               ಕೇಸರಿ ವಾಡಾ                               ಅಖಿಲ ಮಂಡಯಿ

ಮೊದಲ ಗೌರವದ ಸಾಲಿನಲ್ಲಿಲ್ಲದಿದ್ದರೂ , ಶ್ರೀಮಂತ ದಗಡು ಶೇಟ್ ಹಲವಾಯಿ ಗಣಪತಿ ಸುಮಾರು ೧೦೮ ವರ್ಷಗಳಷ್ಟು ಹಳೆಯದಾಗಿದ್ದು ಅತ್ಯಂತ ಪ್ರಸಿದ್ಧವಾಗಿದೆ . ಬೇಡಿದ್ದನ್ನು ತಪ್ಪದೆ ನಡೆಸಿಕೊಡುವ ದೇವರು ಎಂಬ ಬಲವಾದ ನಂಬಿಕೆಯಿದ್ದು ಲಕ್ಷಗಟ್ಟಲೆ ಭಕ್ತಾದಿಗಳು ವರ್ಷವಿಡೀ ಭೇಟಿಕೊಡುತ್ತಾರೆ. ಪ್ರತಿವರ್ಷವೂ ಗಣೇಶೋತ್ಸವ ನಡೆಯುವ ಹತ್ತುದಿನಗಳ ಪೈಕಿ ಒಂದು ನಿಗದಿತ ದಿನದಲ್ಲಿ ಮಹಿಳೆಯರು ಹಾಗೂ ಮಕ್ಕಳಿಂದ ದೇವರೆದುರು ಅಥರ್ವ ಶೀರ್ಷ ಪಥನ ನಡೆಯುತ್ತದೆ. ವರ್ಷ ಸರಿ ಸುಮಾರು ೨೫ ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು  ಇದರಲ್ಲಿ ಭಾಗವಹಿಸಿದ್ದಾರೆ !!! ಕೇವಲ ಹತ್ತು ದಿನಗಳಲ್ಲಿ ಗಣಪತಿಗೆ ಕೋಟಿ ರೂ ಗು ಹೆಚ್ಚು ಕಾಣಿಕೆ ಸಂಗ್ರಹವಾಗುತ್ತದೆ. ಸಲವಂತೂ ಯಾವುದೊ ಭಕ್ತ ಮಹಾಶಯ ೮೦ ಲಕ್ಷ ಬೆಲೆ ಬಾಳುವ ಚಿನ್ನದ ಕಮಲದ ಹೂವನ್ನು ಅರ್ಪಿಸಿದ್ದಾರೆ !



ದೀಪಾಲಂಕೃತ ದಗಡು ಶೇಟ್ ಮಂದಿರ

ಪೋಲೀಸರಿಗಂತೂ ಹತ್ತು ದಿನಗಳು ಶಾಂತಿಯುತವಾಗಿ ಕಳೆದರೆ ಸಾಕಪ್ಪ ಎಂಬ ಟೆನ್ ಶನ್ . ಸುತ್ತ ಮುತ್ತಲ ಮನೆಯವರಿಗೆ ಗಲಾಟೆ ಟೆನ್ ಶನ್ , ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗೆ ತಮ್ಮ ಹಣ , ಒಡವೆಗಳ ಸುರಕ್ಷಿತತೆಯ ಟೆನ್ ಶನ್ ! ಪರಿಸರದ ಬಗ್ಗೆ ಕಾಳಜಿ ಇರುವವರಿಗೆ ಮಾಲಿನ್ಯದ ಟೆನ್ ಶನ್ ! ಒಟ್ಟಿನಲ್ಲಿ ಗಣಪನ ಸನ್ನಿಧಿಯಲ್ಲಿ ಎಲ್ಲರಿಗೂ ಟೆನ್ಶನ್ . ಸಲ ವಂತೂ ರಂಜಾನ್ ಕೂಡ ಅದೇ ದಿನ ಬಂದಿದ್ದು ಇನ್ನಷ್ಟು ಟೆನ್ಶನ್ !


ಕಳೆದ ಕೆಲ ವರ್ಷಗಳಿಂದ ಪುಣೆ ಹಾಗೂ ಪಿಂಪ್ರಿ- ಚಿಂಚವಾಡ ಕಾರ್ಪೋರೇಶನ್ ಗಳವರು ಹಬ್ಬದ ಸಡಗರದಲ್ಲಿ ಪರಿಸರವನ್ನು ಮರೆಯದಂತೆ , ಮಾಲಿನ್ಯವನ್ನು ಕಮ್ಮಿ ಮಾಡುವಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ನದಿಗಳಲ್ಲಿ ವಿಸರ್ಜಿಸಿ , ನೀರನ್ನು ಕಲುಷಿತಗೊಳಿಸುವ ಬದಲು ವಿಸರ್ಜನೆಗೆಂದೇ ವಿಶೇಷ ವಾಗಿ ದೊಡ್ಡ ತೊಟ್ಟಿಗಳನ್ನು ತಯಾರಿಸಿ ನದೀ ತೀರದಲ್ಲಿ ಇಡಲಾಗಿದೆ. ನೈರ್ಮಾಲ್ಯ ( ದೇವರಿಗೆ ಅರ್ಪಿಸಿದ ಹೂ- ಗರಿಕೆ , ಹಾರಗಳು ಇತ್ಯಾದಿ. ) ವನ್ನು ಸಂಗ್ರಹಿಸಲು ಬೇರೆ ತೊಟ್ಟಿಗಳಿವೆ. ಹೀಗೆ ಸಂಗ್ರಹಿಸಿದ ನೈರ್ಮಾಲ್ಯದಿಂದ ಗೊಬ್ಬರ ತಯಾರಿಸುವ ಯೋಜನೆಯನ್ನೂ ನಗರ ಪಾಲಿಕೆಗಳು ಹಮ್ಮಿಕೊಂಡಿವೆ . ಭಕ್ತರನ್ನು ಅವುಗಳ ಪೂರ್ಣ ಹಾಗೂ ಸರಿಯಾದ ಬಳಕೆ ಮಾಡುವಂತೆ ವಿನಂತಿಸಲಾಗಿದೆ. ಪ್ರಯತ್ನಕ್ಕೆ ಸಾಕಷ್ಟು ಪ್ರೋತ್ಸಾಹವೂ ದೊರಕಿರುವುದು ಸಂತೋಷದ ವಿಷಯ ! ಪೆಂಡಾಲ್ ಗಳಿಗೆಂದು ರಸ್ತೆ ಅಗೆಯದ, ವಾಹನ ಸಂಚಾರಕ್ಕೆ ಅಡ್ಡಿ ಮಾಡದಂತೆ ಮಂಟಪ ರಚಿಸಿದ, ಪರಿಸರ ಹಾಗೂ ಶಬ್ದ ಮಾಲಿನ್ಯವನ್ನು ಗಮನದಲ್ಲಿಟ್ಟು ಕೊಂಡ, ಇವೆಲ್ಲವುಗಳ ಬಗ್ಗೆ ಕಾನೂನನ್ನು ಪಾಲಿಸಿದ ಗಣೇಶ ಮಂಡಳಗಳಿಗೆ ಬಹುಮಾನವನ್ನು ವರ್ಷದಿಂದ ಕೊಡಲಾಗುತ್ತದೆ.
ಇದು ಪರಿಣಾಮಕಾರಿಯಾಗಿದ್ದು ಕಂಡು ಬಂದಿದೆ

ಇವೆಲ್ಲವೂ ಬರಿಯ ಖುಷಿಯಲ್ಲಿಯೇ ಮುಗಿಯುತ್ತವೆ ಎಂದೇನೂ ಇಲ್ಲ ! ಬಹಳಷ್ಟು ತಕರಾರು - ಸಣ್ಣ ಪುಟ್ಟ ಜಗಳಗಳು ನಡೆದೇ ಇರುತ್ತವೆ ಅವಧಿಯಲ್ಲಿ. ವರ್ಷ ಯಾವುದೋ ಗಣೇಶ ಮಂಡಲ ದವರಲ್ಲಿ ಹೆಚ್ಚು ದೇಣಿಗೆ ಕೊಟ್ಟವರ ಲಿಸ್ಟ್ ನಲ್ಲಿ ತಮ್ಮವರ್ಯಾರದೋ ಹೆಸರು ಪ್ರಕಟವಾಗಿಲ್ಲ ಎಂಬುದನ್ನೇ ದೊಡ್ಡದಾಗಿಸಿ ಹೊಡೆದಾಡಿ ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೇವಲ ಹಣ ಹಾಗೂ ಹೆಸರಿಗಾಗಿ ಎಷ್ಟೋ ಮಂಡಲಗಳು ಹುಟ್ಟಿಕೊಳ್ಳುತ್ತವೆ. ಜನರಿಂದ ಗಣಪತಿಯ ಹೆಸರಲ್ಲಿ ಒತ್ತಾಯಪೂರ್ವಕ ದುಡ್ಡು ಸಂಗ್ರಹಿಸಿ, ಹೆಸರಿಗೊಂದು ಮಂಟಪ - ಪೂಜೆ ಮುಗಿಸಿ , ಉಳಿದ ಹಣವನ್ನು ಕುಡಿದು ಮಜಾ ಮಾಡುವವರಿಗೇನೂ ಕಮ್ಮಿ ಇಲ್ಲ !


ಸಲ ನಾನು ವಿಸರ್ಜನಾ ಮೆರವಣಿಗೆಯನ್ನು ನಮ್ಮ ತಾರಸಿಯಿಂದ ನೋಡುತ್ತಿದ್ದೆ . ಅದರಲ್ಲಿ ಅದೆಷ್ಟೋ ಜನ ಪರಮಾತ್ಮ ಆಡಿಸಿದಂತೆ ... ಎಂದು ಕುಣಿಯುತ್ತಿದ್ದರು ಒಬ್ಬನಂತೂ ರಸ್ತೆಯ ಮೇಲೆ ಮಲಗಿ ಹೊರಳಾಡುತ್ತಾ... ನಾಗ ನೃತ್ಯದ ಭಂಗಿ ತೋರುತ್ತ ಕೈ ಕಾಲು ಕುಣಿಸುತ್ತಿದ್ದ ! ಆತನದು ನಿಜವಾದ ನಾಗ ನೃತ್ಯವೋ ಅಥವಾ ತನ್ನ ( ದುರ ) ಅವಸ್ಥೆಮುಚ್ಚಿಡುವ ಪ್ರಯತ್ನವೋ ಎಂಬುದು ನನಗಂತೂ ಸ್ಪಷ್ಟವಾಗಲಿಲ್ಲ !


ಅಂತೂ ಹೆಚ್ ಎನ್ , ಡೆಂಗ್ಯು ,ಭಯೋತ್ಪಾದಕರ ಭೀತಿ ಇತ್ಯಾದಿಗಳ ನಡುವೆಯೂ ತಮ್ಮ ನೆಚ್ಚಿನ ಹಬ್ಬದ ಸಂಭ್ರಮವನ್ನು ಎಳ್ಳಷ್ಟೂ ಕಮ್ಮಿ ಮಾಡಿಕೊಳ್ಳದೆ ಸಾಂಗವಾಗಿ ಪೂರೈಸಿದ ಪುಣೆಯ ಜನ ಇನ್ನು ನವರಾತ್ರಿಯ ಸಂಭ್ರಮವನ್ನು ಎದುರುಗೊಳ್ಳಲು ಕಾಯುತ್ತಿದ್ದಾರೆ !




    ಆಕರ್ಷಕ ರಂಗೋಲಿ                               ಮೆರವಣಿಗೆಯಲ್ಲಿ ಮಹಿಳೆಯರು !

                                                                       ದೃಶ್ಯಾವಳಿಗಳು  
















19 comments:

sunaath said...

ಚಿತ್ರಾ,
ಮುಂಬಯಿ ಬಗೆಗೆ ನೀವು ಕೊಡುತ್ತಿರುವ ಮಾಹಿತಿ ಸೊಗಸಾಗಿರುತ್ತದೆ. ಈ ಸಲದ ಲೇಖನ ಹಾಗು ಚಿತ್ರಗಳು ವಿಶೇಷವಾಗಿವೆ.

ಜಲನಯನ said...

ಚಿತ್ರಾ...ಒಳ್ಲೆಯ ಮಾಹಿತಿ..ಅದರಲ್ಲೂ ಮರಾಠಿ ವೈಖರಿಯೇ ಎಂದು ಪ್ರಸಿದ್ಧಿ ಪಡೆದ ಗಣೇಶೋತ್ಸವದ ವಿವರಗಳನ್ನು ಚಿತ್ರ ಸಮೇತ ನೀಡಿದ್ದಕ್ಕೆ...ಧನ್ಯವಾದಗಳು...

Ittigecement said...

ಚಿತ್ರಾ...

ನಾನು ಮುಂಬೈನಲ್ಲಿ ಎರಡು ವರ್ಷ ಗನಪತಿಯನ್ನು ನೋಡಿ ಆನಂದಿಸಿದ್ದೆ..
ನಿಜಕ್ಕೂ ಅದೊಂದು ಮರೆಯಲಾಗದ ಅದ್ಭುತ ಅನುಭವ..!!

ಮತ್ತೊಮ್ಮೆ ಹಳೆಯ ನೆನಪಾಯಿತು...

ಪುಣೆಯಲ್ಲಿ "ತಿಲಕರು" ಶುರುಮಾಡಿದಂಥಹ ಉತ್ಸವದ ಮೂರ್ತಿಯನ್ನು ಒಮ್ಮೆ ನೋಡಿದ್ದೆ..

ಚಂದದ ಫೋಟೊ.. ಲೇಖನಕ್ಕೆ ಅಭಿನಂದನೆಗಳು...

PARAANJAPE K.N. said...

ಪುಣೆಯ ಗಣೇಶೋತ್ಸವದ ವೈಭವದ ತಾಜಾ ವರದಿ. ಚೆನ್ನಾಗಿದೆ. ಗಣಪತಿ ಬಪ್ಪಾ... ಮೋರಯಾ

ಸಾಗರದಾಚೆಯ ಇಂಚರ said...

ಗಣಪತಿ ಬಪ್ಪಾ... ಮೋರಯಾ

cholo idde

ಪ್ರಗತಿ ಹೆಗಡೆ said...

ಒಳ್ಳೆಯ ಮಾಹಿತಿ... ಧನ್ಯವಾದಗಳು ಮೇಡಂ...

ಸುಧೇಶ್ ಶೆಟ್ಟಿ said...

nange mumbai nalli meravaNige nodoke aaglilla... anthu puneya meravaNigeyannE nodida haage bhaasavaayithu :)

ಮನಸಿನಮನೆಯವನು said...

ಜೈ ಗಣೇಶ..

ಸವಿಗನಸು said...

ಚಿತ್ರಾ,
ಚಿತ್ರಗಳು ಚೆನ್ನಾಗಿವೆ...
ಒಳ್ಳೆಯ ಮಾಹಿತಿ...
ಧನ್ಯವಾದಗಳು

ದಿನಕರ ಮೊಗೇರ said...

ಚಿತ್ರಾ ಮೇಡಮ್,
ಪುಣೆಯ ಗಣೇಶ ಹಬ್ಬದ ಬಗ್ಗೆ ತುಂಬಾ ವಿವರಣೆ ಕೊಟ್ಟಿದ್ದೀರಾ..... ತುಂಬಾ ಧನ್ಯವಾದ .... ಫೋಟೊ ನೋಡಿ ನಾನೂ ಮೆರವಣಿಗೆಯಲ್ಲಿ ಭಾಗವಹಿಸಿದ ಹಾಗಾಯಿತು....

ಚಿತ್ರಾ said...

ಕಾಕಾ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು . ಒಂದು ಚಿಕ್ಕ ತಿದ್ದುಪಡಿ. ಇದು ಮುಂಬಯಿ ಅಲ್ಲ , ಪುಣೆಯ ಗಣೇಶೋತ್ಸವದ ಮಾಹಿತಿ . :)

ಚಿತ್ರಾ said...

ಆಜಾದ್ ,
ಧನ್ಯವಾದಗಳು . ಪುಣೆಯ ಜನ ತಮ್ಮ ಸಂಸ್ಕೃತಿಯ ಬಗ್ಗೆ ಅತೀವ ಅಭಿಮಾನ ಇಟ್ಟುಕೊಂಡಿದ್ದಾರೆ. ಹೀಗಾಗಿ ಗಣೇಶೋತ್ಸವ ಅಂತೂ ಅವರ ಅಚ್ಚುಮೆಚ್ಚಿನ ಹಬ್ಬ
ಆಚರಣೆಯಲ್ಲಿ ಯಾವ ಕೊರತೆಯೂ ಬರದಂತೆ ಉತ್ಸಾಹದಿಂದ ನಡೆಸುತ್ತಾರೆ ! ಇವರ ಉತ್ಸಾಹವನ್ನು ಮೆಚ್ಚಲೇ ಬೇಕು !

ಚಿತ್ರಾ said...

ಥ್ಯಾಂಕ್ಸ್ ಪ್ರಕಾಶಣ್ಣ ,
ಮುಂಬಯಿಯ ಗಣೇಶ ಉತ್ಸವ ಇನ್ನೂ ವೈಭವೋಪೇತವಾಗಿ ನಡೆಯುತ್ತದೆ ಎಂದು ಕೇಳಿದ್ದೇನೆ. ಪುಣೆಗೆ ಬಂದ ಮೊದಲ ೧-೨ ವರ್ಷ ಗಣಪತಿ ನೋಡಲು ಹೋಗುವ ಧೈರ್ಯ ಮಾಡಿದ್ದೆ . ಆದರೆ ,ನೋಡಲು ಎಷ್ಟೇ ಚಂದ ಎನಿಸಿದರೂ ,, ಆ ಜನ ಜಂಗುಳಿಯಲ್ಲಿ , ನೂಕು -ನುಗ್ಗುತ್ತಾ ಓಡಾಡುವುದು ಸರಿ ಹೋಗದ ಕಾರಣ ನಿಲ್ಲಿಸಿ ಬಿಟ್ಟೆ . ಮನೆಯ ಸುತ್ತ ಮುತ್ತಲಿನ ಕೆಲ ಗಣಪತಿ ನೋಡಿ ಬರುತ್ತೇನೆ ಅಷ್ಟೇ.

ಚಿತ್ರಾ said...

ಪರಾಂಜಪೆ, ಗುರು , ಪ್ರಗತಿ , ಕತ್ತಲೆ ಮನೆ , ಸವಿಗನಸು ,
ಮೆಚ್ಚುಗೆಗೆ ಧನ್ಯವಾದಗಳು

ಚಿತ್ರಾ said...

ಸುಧೇಶ್ ,
ಅಲ್ಲೇ ಇದ್ದು , ಗಣಪತಿ ನೋಡುವ ಚಾನ್ಸ್ ತಪ್ಪಿಸಿಕೊಂಡಿದ್ದೀರಲ್ಲ? ಇರಲಿ , ಮುಂದಿನ ವರ್ಷ ತಪ್ಪಿಸಬೇಡಿ .

ಚಿತ್ರಾ said...

ದಿನಕರ್ ,
ಲೇಖನ ಮೆಚ್ಚಿದ್ದಕ್ಕೆ , ಧನ್ಯವಾದಗಳು . ಹೀಗೇ , ಬರುತ್ತಾ ಇರಿ .

shivu.k said...

ಚಿತ್ರಾ ಮೇಡಮ್,

ಪುಣೆಯ ಗಣಪತಿ ಉತ್ಸವವನ್ನು ತುಂಬಾ ಚೆನ್ನಾಗಿ ಮಾಹಿತಿಯೊಂದಿಗೆ ವಿವರಿಸಿದ್ದೀರಿ. ಫೋಟೊಗಳೂ ಅದರ ಸಂಪ್ರದಾಯ ಮತ್ತು ಅದ್ದೂರಿತನವನ್ನು ಕಟ್ಟಿಕೊಡುತ್ತವೆ.ಅದಕ್ಕಾಗಿ ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಅಕ್ಕಾ,

ವಿಜೃಂಭಣೆಯ ಉತ್ಸವಕ್ಕಿಂತ ಸರಳ ಉತ್ಸವ ಎಷ್ಟು ಚೆಂದ ಅಲ್ಲವೇ? ನಮ್ಮಲ್ಲಿ ಅಂದರೆ ಶಿರಸಿಯಲ್ಲಿ ತುಂಬಾ ಸರಳವಾಗಿ ಆಚರಿಸುತ್ತಾರೆ. ಇಲಿ ಪಂಚಮಿಯದಿನ ಅಕ್ಕ ಪಕ್ಕದ ಮನೆಗೆಲ್ಲಾ ಊರವರು ಹೋಗಿ ಸಿಹಿ ತಿಂದು, ಗಣಪನನ್ನು ಕಳುಹಿಸುತ್ತಾರೆ. ದುಡ್ಡು ದಂಡವಾಗದಂತೇ ಆದಷ್ಟು ಸರಳವಾಗಿ ಆಚರಿಸಿದರೆ ಹೆಚ್ಚು ಅರ್ಥಬರುವುದು ಎಂದೆನಿಸುತ್ತದೆ ನನಗೆ.

ಮತ್ತೆ "ನೈರ್ಮಾಲ್ಯ"ವೋ ಇಲ್ಲ "ನೈರ್ಮಲ್ಯ"ವೋ? :) ಇದೊಂದು ಉತ್ತಮ ವಿಚಾರ. ಪುಣೆಯ ಕ್ಲೀನಿಂಗ್‌ಗೆ ಹೆಚ್ಚು ಸಹಕಾರಿ ಅಲ್ಲವೇ? :)

ಸುಂದರ ಚಿತ್ರಗಳನ್ನೊಳಗೊಂಡ ಉತ್ತಮ ಲೇಖನ.

ಸೀತಾರಾಮ. ಕೆ. / SITARAM.K said...

ಸುಂದರ ಲೇಖನ ಜೊತೆಗೆ ಉತ್ತಮ ಚಿತ್ರಗಳು. ಮಹಾರಾಷ್ಟ್ರದ ಗಣಪತಿ ಪೂಜೆ ವಿಶಿಷ್ಟವೇ ಹೌದು.