November 18, 2017

ಹೇಳು ....ಇರುಳ ನೆರಳಲಿ  ಎನ್ನ 
ಮರುಳು ಮಾಡುವುದೇಕೆ 
ಮುಂಗುರುಳ ಸರಿಸುತಲಿ
ಮುದ್ದುಗರೆಯುವೆಯೇಕೆ 

ನನ್ನೊಲವೆ ನೀನೆಂದು 
ಮೋಹಗೊಳಿಸುವುದೇಕೆ 
ಅಧರಗಳ ಮಧುವನ್ನು 
ಸವಿದು ನಗುತಿಹೆಯೇಕೆ 

ಹೃದಯದಲಿ ನೂರಾರು 
ಬಯಕೆ ತುಂಬುವುದೇಕೆ 
ಮತ್ತೀಗ ಮೌನದಲಿ  
ಮನವ ಕಲಕುವುದೇಕೆ

ಹಾಗೇಕೆ ಹೀಗೇಕೆ
ಹೇಳು ಇನಿಯಾ 
ಬರುವುದೋ ಬಿಡುವುದೋ 
ನಿನ್ನ ಸನಿಯ 

October 9, 2017

ಬಯಕೆ

ರವಿಯ ಹೊಂಗಿರಣವು  ಕಣ್ಣ ಸೋಕುವ ತನಕ 
ಮುದ್ದು ಮುಖದಲಿ  ಕೆಂಪು ಎದ್ದು ಕಾಣುವ ತನಕ 
ಎದೆ ಬಡಿತ  ಹೆಚ್ಚಾಗಿ  ಕಿವಿಗೆ ಕೇಳುವ ತನಕ 
ಬಂಧಿಸುವ  ಬಯಕೆಯಿದೆ  ನನ್ನ ಚೆಲುವೆ 

ಹಚ್ಚಿದಾ ತುಟಿ ಬಣ್ಣ ಒರೆಸಿ ಹೋಗುವ ತನಕ 
ಕಣ್ಣಿನಾ ಕಾಡಿಗೆಯು ತೀಡಿ ಹೋಗುವ ತನಕ 
ಕಟ್ಟಿದಾ ಹೆರಳದು  ಬಿಚ್ಚಿ ಹರಡುವ ತನಕ 
ಮುದ್ದಿಸುವ ಬಯಕೆಯಿದೆ ನನ್ನ  ಚೆಲುವೆ 

ನಾಚಿಕೆಯ ತೆಳು ಪರದೆ  ಕಳಚಿ ಬೀಳುವ ತನಕ 
ಬಯಕೆಗಳ  ಪೂರದಲಿ  ಕೊಚ್ಚಿ ಹೋಗುವ ತನಕ 
ಮೈಮನಗಳೊಂದಾಗಿ  ಕರಗಿ ಹೋಗುವ ತನಕ 
ಪ್ರೀತಿಸುವ ಬಯಕೆಯಿದೆ ನನ್ನ ಚೆಲುವೆ 

July 22, 2017

ಕಾಯುತಿಹೆ .....ನಿನ್ನ ಕನಸುಗಳಲ್ಲಿ ನಾನಿಹೆನೋ ಇಲ್ಲವೋ 
ನನ್ನ ಕನವರಿಕೆಯಲಿ ನೀನಿರುವೆ ಗೆಳೆಯ 
ಬೆಳಗಿನಲಿ  ಸಂಜೆಯಲಿ , ಏಕಾಂತದಿರುಳಿನಲಿ 
ನನ್ನ ಮನ ಬಯಸಿಹುದು  ನಿನ್ನ ಸನಿಯ 

ತನುವ ಕಚಗುಳಿಯಿಡುತ ಕೇಳುತಿದೆ ತಂಗಾಳಿ 
ಎಂದು ಬರುವನು  ಹೇಳು ನಿನ್ನ  ಇನಿಯ ?
ಬಳಸುವನೆ ತೋಳಿನಲಿ  ಕೆಣಕುವನೆ ಮಾತಿನಲಿ ?
ಪಿಸುಮಾತು  ತುಂಬುವುದೇ  ನಿನ್ನ  ಕಿವಿಯ ?

ಮುಡಿದ ಮಲ್ಲಿಗೆ ಮಾಲೆ  ಜಡೆಯಲ್ಲೇ ಬಾಡುವುದೇ?
ಪರಿಮಳವು  ಪಸರುವುದೇ ಕೋಣೆಯಲ್ಲಿ?
ಬಳೆಯ ಕಿಂಕಿಣಿ  ನಾದ ಕೇಳುವುದೇ ನೀ  ಹೇಳು 
ಕುಂಕುಮವು  ಕರಗುವುದೇ  ಬೆವರಿನಲ್ಲಿ ? 

ಸಂಜೆ ಇಳಿದಿದೆ ನಲ್ಲ ,  ಒಳಗೆ ಬೆಳಗಿದೆ ದೀಪ  
ಸಜ್ಜೆಮನೆಯೊಳಗಿಹುದು  ಧೂಪದಾರತಿಯು   
ಕಾತರದಿ ಕಾಯುತಿಹೆ ಮನೆಯ ಮುಂಬಾಗಿಲಲಿ  
ಬಂದು ಬೇಗನೆ  ಮನಕೆ ಮುದವ ನೀಡು

June 28, 2017

ಮಲೆನಾಡ ಮಳೆಗಾಲಧೋ ಎಂದು ಸುರಿವ ಮಳೆ
ರಸ್ತೆ ತುಂಬಿದ ನೀರು 
ತೇಲಿ ಬಿಟ್ಟಿಹ ದೋಣಿ 
ಕುಣಿದು ಸಾಗುವುದು 

ಬಚ್ಚಲಿನ ಒಲೆಯಲ್ಲಿ 
ಗೇರು ಬೀಜದ  ಘಮಲು 
ಅಡುಗೆ ಮನೆಯೊಳಗೆ
ಬಿಸಿ ಹಪ್ಪಳದ ಪರಿಮಳ 

ಅಂಗಳಕೆ ಕಾಲಿಡಲು 
ಇಂಬಳದ ಭಯವಿಹುದು  
ಕಂಬಳಿಯ ತೆಕ್ಕೆಯಲಿ 
ಮಲಗುವುದೇ ಬಲು  ಸುಖ 

ಕಿಟಕಿ ಬದಿಯಲಿ ಖುರ್ಚಿ 
ಕೈಯಲ್ಲಿ ಬಿಸಿ ಕಾಫಿ 
ಹೊರಗೆ ಸುರಿಯುವ ಮಳೆಯ 
ಜೋಗುಳದ ಹಾಡು 

ಮಲೆನಾಡ ಮಳೆಗಾಲ 
ಮನಸಲ್ಲಿ ಹಸುರಾಗಿ 
ಎಂದೆಂದೂ ಮರೆಯದಿಹ 
ಮಧುರ ನೆನಪು 

June 18, 2017

ಚಂದ್ರ ನಾಚಿದ ಸಮಯ !ನೇಸರನು ಭೂಮಿಯನು
ಚುಂಬಿಸುವ ಸಮಯದಲಿ
ಕಣ್ಣ ಮಿಟುಕಿಸಿತೊಂದು ತುಂಟ ತಾರೆ
ಸಾಗರನು ಕೆಂಪಾಗೆ
ನಾಚಿ ನಿಂತನು ಚಂದ್ರ
ಪ್ರಿಯನ ತೋಳಲಿ ಅಡಗಿದಳು ನೀರೆ
ಕನಸು ತುಂಬಿದ ಕಣ್ಣು
ತುಸುವೇ ಬಿರಿದಿಹ ಅಧರ
ಬಿಸಿಯಾಗಿ ಕೆಂಪಾದ ಅವಳ ಕೆನ್ನೆ
ಬಳ್ಳಿ ನಡುವಿನ ತನುವು
ನವಿರಾಗಿ ನಡುಗಿರಲು
ಬಿಗಿಯಾಗಿ ಬಳಸಿದಳು ಇನಿಯನನ್ನೇ 

June 13, 2017

ವಾಟ್ಸ್ ಅಪ್ !

ಇ-ಮೇಲ್ ಟೈಪ್ ಮಾಡುತ್ತಿದ್ದವಳ ಪಕ್ಕದಲ್ಲಿದ್ದ  ಮೊಬೈಲ್ ಮಿಂಚಿತು . ಸ್ಕ್ರೀನಲ್ಲಿ ವಾಟ್ಸ್ ಅಪ್ ನ  ನೋಟಿಫಿಕೇಶನ್ ಕಂಡಾಗ  ಅವಳ ತುಟಿಯ ಮೇಲೆ ಸಣ್ಣ ನಗು ಮೂಡಿತು . ಅದು ಯಾರದ್ದೆಂದು  ನೋಡುವ ಅಗತ್ಯವಿರಲಿಲ್ಲ ! 
ಮೊದಲು  ಇ-ಮೇಲ್ ಕಳಿಸಿ , ಮತ್ತೆ ಮೆಸೇಜ್ ನೋಡಿದರಾಯ್ತೆಂದು  ಬರೆಯುವುದನ್ನು ಮುಂದುವರಿಸಿದಳು . 
ಮುಂದಿನ ೩ ನಿಮಿಷಗಳಲ್ಲಿ ಅವಳು  ಮೇಲ್ ಕಳಿಸಿ  ಮೊಬೈಲ್ ಕೈಗೆತ್ತಿಕೊಳ್ಳುವಷ್ಟರಲ್ಲಿ ೪-೫ ಮೆಸೇಜ್ ಗಳು ಕಾಯುತ್ತಿದ್ದವು .  ಎಲ್ಲವೂ ಅವನದ್ದೇ . 

" ಹಲೋ ಮೇಡಂ  ... 
..ಸ್ಮೈಲಿ 
 ಏನ್ ಮಾಡ್ತಾ ಇದೀರಾ? 
ತುಂಬಾ ಬ್ಯುಸಿ ನಾ? 
 ಟೈಂ ಇಲ್ಲ ಅನ್ಸತ್ತೆ  
ಹಲೋ ....."

ಮುಗುಳುನಗು ಸಲ್ಪ ದೊಡ್ಡದಾಯಿತು . 
"ಹಲೋ  
ಹೇಳಿ . ಇ ಮೇಲ್ ಮಾಡ್ತಾ ಇದ್ದೆ . ನೋಡಿಲ್ಲ .ಸಾರಿ "

ಅವನ ರಿಪ್ಲೈ ಬಂತು ತಕ್ಷಣವೇ 

" ನೋಡಿರ್ತೀರಾ ಗ್ಯಾರಂಟಿ . ರಿಪ್ಲೈ ಮಾಡಿಲ್ಲ ಅಷ್ಟೇ . 

ನಂಗೆ ಮೇಲ್ ಮಾಡ್ತಿದ್ರ? ನಾನು ನಿಮಗೆ ನನ್ ಇ ಮೇಲ್ ಐ ಡಿ ಕೊಟ್ಟೆ ಇಲ್ಲ ? "


"ಹಾಂ , ಪ್ರಪಂಚದಲ್ಲಿ ನೀವೊಬ್ರೆ ಇರೋದು  ನಂಗೆ ಇ ಮೇಲ್ ಮಾಡೋಕೆ  ."
"ಹಹಹ  , ನಾನೊಬ್ನೆ ಇದ್ರೆ , ಇ ಮೇಲ್ ಯಾಕ್ರೀ ಮಾಡ್ತಿರ  ನಿಮ್ಮೆದುರಿಗೆ  ಕೂತಿರ್ತೀನಿ  ಬೇಕಾದ್ರೆ .."

"ಹಾಂ ನಿಮಗೆ ಕೆಲಸ ಇಲ್ಲ ಅಂದ್ರೆ ನಂಗೆ ಇದೇರಿ . ನಮ್ ಮ್ಯಾನೇಜರ್ ಆಗಿಂದ ಕರಿತಾ ಇದಾರೆ .
ಹೋಗ್ಬೇಕೀಗ.  ಮತ್ತೆ ಸಿಗ್ತೀನಿ ."

"  :(  ಹೋಗ್ಬೇಡ್ರೀ  .. ಪ್ಲೀಸ್  ..... "ಮುಂದುವರಿಯಿತು  ಹೀಗೆ  
ಸೌಮ್ಯಾ  ಯೋಚಿಸುತ್ತಿದ್ದಳು .  ಎಷ್ಟು ದಿನವೂ ಆಗಿಲ್ಲ  ಪರಿಚಯವಾಗಿ , ಯಾಕೆ ಇಷ್ಟು ಹಚ್ಚಿಕೊಂಡೆ ಇವನನು ?  ಜಾಲಿ ಆಗಿ  ಮಾತಾಡ್ತಾನೆ ಅಂತಲ? ಅಥವಾ  ಬುದ್ಧಿವಂತ ಅಂತಲ?  ಎಳೆ ವಯಸ್ಸು  ಕೆಲವೊಮ್ಮೆ ಹುಡುಗು  ಬುದ್ಧಿ ಅನಿಸಿದರೂ  ಹೇಗೋ ಒಂಥರಾ ಇಷ್ಟವಾಗಿ ಬಿಟ್ಟಿದ್ದ ಅವನು .   ಸಾಧಾರಣವಾಗಿ ಯಾರದೇ  ಫ್ರೆಂಡ್ ರಿಕ್ವೆಸ್ಟ್ ಇದ್ದರೂ ಸುಲಭವಾಗಿ  ಅಕ್ಸೆಪ್ಟ್ ಮಾಡದ ಅವಳು  ಇವನ ರಿಕ್ವೆಸ್ಟ್ ಅನ್ನೂ ತುಂಬಾ ದಿನಗಳ ಕಾಲ ಹಾಗೆಯೇ ಇಟ್ಟಿದ್ದಳು . ಆದರೂ ಅವನ ಮೆಸೇಜ್  ಕುತೂಹಲ ತಂದಿತ್ತು ಅವಳಿಗೆ. 

" ಮೇಡಂ , ನಿಮಗೆ ರಿಕ್ವೆಸ್ಟ್ ಕಳಿಸೋರು ನಿಮ್ಮ ಅಭಿಮಾನಿ ಅಂತ ಹೇಳೋರೂ ತುಂಬಾ ಜನ ಇರಬಹುದು .ಅದರಲ್ಲಿ ನಾನೂ ಒಬ್ಬ ಅಂತ  ಸೈಡಿಗೆ ಇಟ್ಟಿರ್ತೀರ . ನಾನು ನಿಮ್ಮ ದೊಡ್ಡ ಅಭಿಮಾನಿ ಅಂತ ಎಲ್ಲ ಹೇಳ್ಕೊಳೋಲ್ಲ . ನಿಮಗಿಂತ  ಜಾಸ್ತಿ ನಾನು ಇಷ್ಟ ಪಡೋ ಬರಹಗಾರರು ಇದಾರೆ. ಆದರೆ ನಿಮ್ಮ ಬರವಣಿಗೆಯ  ಶೈಲಿ ಇಷ್ಟ ಆಗತ್ತೆ . ಸರಳ ಸುಲಭ  ಅನಿಸತ್ತೆ .  ನನಗೂ ಸಾಹಿತ್ಯದಲ್ಲಿ ಅಲ್ಪ ಸ್ವಲ್ಪ ಆಸಕ್ತಿ ಇದೆ .ನಾನೂ ಯಾವಾಗ್ಲಾದ್ರೂ ಒಂದೋ ಎರಡೋ ಕತೆ ಬರ್ದಿದೀನಿ . ( ಅದು ನನಗೇ ಇಷ್ಟ ಆಗಿಲ್ಲ ಬಿಡಿ ) . ನಿಮ್ಮಿಂದ ಯಾವಾಗ್ಲಾದ್ರೂ ಸಲಹೆಗಳನ್ನ ತೊಗೋಳೋಣ ಅಂತ ಅನಿಸತ್ತೆ . ಹೀಗಾಗಿ  ರಿಕ್ವೆಸ್ಟ್ ಕಳ್ಸಿರೋದು . ದಯವಿಟ್ಟು  ಅಕ್ಸೆಪ್ಟ್ ಮಾಡಿ . ಆದರೆ ಒತ್ತಾಯ ಏನಿಲ್ಲ . ನಿಮ್ಮ ಅಕೌಂಟ್ , ನಿಮ್ಮಿಷ್ಟ !  "
ಇಂಟರೆಸ್ಟಿಂಗ್  ಅನಿಸಿ , ಅವನ ಪ್ರೊಫೈಲ್ ಗೆ ಹೋಗಿ ನೋಡಿದಳು . ಸಭ್ಯ  ಎನಿಸಿತು . ತನ್ನ ಪರಿಚಯದ ಇನ್ನೂ ಕೆಲವರು ಅವನ   ಲಿಸ್ಟಲ್ಲಿ  ಇರುವುದು ಕಾಣಿಸಿತು . ಆಮೇಲೆ ಫ್ರೆಂಡ್ಸ್ ಲಿಸ್ಟ್ ಗೆ  ಸೇರಿಕೊಂಡ ಅವನು . 

 ಅಪ್ರೂವ್ ಮಾಡಿದ ಕೆಲ ನಿಮಿಷಗಳಲ್ಲೇ  ಮೆಸೇಜ್ ಬಂದಿತು ಅವನದು .  
"ಅಂತೂ ಇಂತೂ  ಸೇರ್ಸಿದ್ರಿ . ಥ್ಯಾಂಕ್ಸ್ ಮೇಡಂ !  ಇವತ್ತು ನಾನು ಇಲ್ಲಿರೋದಕ್ಕೂ ಸಾರ್ಥಕ ಆಯ್ತು ! "

 ಸುಮ್ಮನೆ ಒಂದು ಸ್ಮೈಲೀ ಕಳಿಸಿ   ಮುಗಿಸಿಬಿಟ್ಟಳು 

ಕೆಲ ದಿನಗಳ ನಂತರ  ಪತ್ರಿಕೆಯೊಂದರಲ್ಲಿ ಅವಳ ಕಥೆ ಪ್ರಕಟವಾದ ಮರುದಿನ  ಅವನು ಕಳಿಸಿದ್ದ ಮೆಸೇಜ್ 

 "ತುಂಬಾ ಇಷ್ಟವಾಯ್ತು ರಿ ಕಥೆ . ಆದರೂ ಯಾಕೋ  ಸಡನ್ ಆಗಿ ಮುಗಿಸಿಬಿಟ್ಟಿರೋ ಹಾಗೆ ಅನಿಸತ್ತೆ . "

"ಹ್ಮಂ .. ಥ್ಯಾಂಕ್ಸ್ .  ಅದೇನೋ , ಹೇಗೆ ಮುಂದುವರೆಸೋದೋ  ಹೊಳಿತಾ ಇರ್ಲಿಲ್ಲ . ಅದಕ್ಕೆ  ಮುಗಿಸಿಬಿಟ್ಟೆ  ! "
ಸಾಹಿತ್ಯಿಕವಾಗಿ ಸುಮಾರಷ್ಟು  ಚರ್ಚೆ ನಡೆದಾಗ .. ಅವಳಿಗೆ , ಅವನ ಬಗ್ಗೆ ಇನ್ನಷ್ಟು ಕುತೂಹಲ ಬೆಳೀತಾ ಇತ್ತು . 

ಪ್ರತಿ ದಿನ , ತಾನು ಲಾಗ್ ಇನ್ ಆಗುವುದೇ ಕಾಯುತ್ತಿದ್ದಂತೆ ಅವನ ಮೆಸೇಜ್ ಗಳು  ಬರುತ್ತಿದ್ದವು . 
ಮಾತನಾಡುವ ವಿಷಯಗಳು , ಅಭಿರುಚಿಗಳನ್ನು ಹಂಚಿಕೊಳ್ಳುವುದು  ಹೆಚ್ಚಾಯಿತು . ನಡುವೆ ಫೋನ್ ನಂಬರ್ ಕೂಡ ವಿನಿಮಯವಾದ ಮೇಲೆ , ವಾಟ್ಸ್ ಅಪ್  ಸಂಭಾಷಣೆ ಹೆಚ್ಚಾಯಿತು . 
ಕೆಲವೊಮ್ಮೆ ಅವಳಿಗೆ ಆಶ್ಚರ್ಯ ಆಗೋ ಅಷ್ಟು !  ತಾನು ಇಷ್ಟು ಸಲಿಗೆ ಯಿಂದ  ಯಾರತ್ರ  ಮಾತಡ್ತೀನಾ ಅಂತ .
ಸ್ನೇಹ ಸಲಿಗೆ  ಹೆಚ್ಚಿದಂತೆ , ಮಾತಿನಲ್ಲೂ ತುಂಟಾಟ ಇಣುಕ ತೊಡಗಿತ್ತು . ಕೆಲವೊಮ್ಮೆ  ಸುಮ್ಮನೆ ನಕ್ಕು  ಮರೆತು ಬಿಟ್ಟರೂ .. ಇನ್ನೂ ಕೆಲವು ಸಲ  ಆ ಬಗ್ಗೆ ಯೋಚನೆ ಆಗುತ್ತಿತ್ತು . ಸರಿ -ತಪ್ಪುಗಳ  ಗೊಂದಲ . 

ತನ್ನ ಜೀವನದಲ್ಲಿ ಏನೇನೋ ಆಗಿ ಹೋಗಿರುವಾಗ  ಅದರ ಜೊತೆ ಇದನ್ನೂ ಸೇರಿಸಿಕೊಳ್ಳುವ ಹಂಬಲವಂತೂ ಇರಲಿಲ್ಲ ! ಆದರೂ ದಿನ ಕಳೆದಂತೆ  ,ಹರಟೆ ಹೆಚ್ಚಿದಂತೆ  ಒಳಗೊಳಗೇ ಕಾಡುವ ಭಯ ! 

ಕ್ರಮೇಣ  ಮೆಸೇಜ್  ಲೇಟ್ ಆದರೆ  ಅದೇನೋ ಕಸಿವಿಸಿ  ಇಬ್ಬರಿಗೂ .  ಮಾಡುವ ಕೆಲಸದಲ್ಲಿ  ಲಕ್ಸ್ಯ ಕೊಡಲಾಗದ ಪರಿಸ್ಥಿತಿ. ಕ್ಷಣಕ್ಕೊಮ್ಮೆ ಮೊಬೈಲ್ / ಫೇಸ್ಬುಕ್  ಚೆಕ್ ಮಾಡುವ  , ತವಕ . ಏನಾದರೂ ಆಗಬಾರದ್ದು ಆಗಿ ಹೋಯ್ತಾ ಎಂಬ ಕಳವಳ .  ಇದೆನಾಗ್ತಾ ಇದೆ ಎಂದು ಅವಳ ಮನಸಲ್ಲಿ ಎಷ್ಟೋ ಸಲ ಎಚ್ಚರಿಕೆಯ ಗಂಟೆ ಹೊಡೆದುಕೊಳ್ಳತೊಡಗಿತು.  ಅವನು ಒಂದ್ಸಲ  ಹೇಳಿದ್ದ ... " ಅಯ್ಯೋ ಈ ರಿಲೇಶನ್ ಶಿಪ್ ಅದು ಇದು ಅಂತ  ಎಲ್ಲ ಟೈಂ ವೇಸ್ಟ್  ಮಾಡೋದ್ರಲ್ಲಿ ನಂಬಿಕೆ ಇಲ್ಲ ನಂಗೆ . ಲೈಫ್ ನ ತಲೆ ಬಿಸಿ ಇಲ್ದೆ ಹಾಯಾಗಿ ಎಂಜಾಯ್ ಮಾಡಬೇಕು ರೀ .  ಆಮೇಲೆ ಮದ್ವೆ - ಸಂಸಾರ  ಅಂತ ಇದ್ದೆ ಇದೆ . ಅಲ್ಲಿವರೆಗೂ  ಯಾವ ತಲೆ ಬಿಸಿ ಬೇಡಪ್ಪಾ " 

ನಿಮ್ ಜನರೇಷನ್   ಹೀಗೇ ಅನ್ಸತ್ತೆ !  ಅಂತ ನಕ್ಕಿದ್ದಳು 
 "ಹಂಗಂದ್ರೆ  ? ನೀವೇನು ಕೃಷ್ಣ ದೇವರಾಯನ ಕಾಲದವರಾ ? ಹೌದೂ ,  ಹತ್ರ ಹತ್ರ  ವರ್ಷ ಆಯ್ತು . ಹರಟೆ ಮೇಲೆ  ಹರಟೆ  ಆಯ್ತು .  ಆದ್ರೆ ಇನ್ನೂ  ಮುಖತಃ ಭೇಟಿ ಮಾಡಿಲ್ಲ . ಫೋಟೋದಲ್ಲಿ  ಚೆನ್ನಾಗಿ ಕಾಣಿಸಿತೀರಾ  ಆದ್ರೆ ನಿಜವಾಗೂ  ಹೇಗೆ  ಕಾಣಿಸ್ತೀರಾ ಅಂತ ಗೊತ್ತಿಲ್ಲ  . ನೋಡಬೇಕು ಅನ್ನೋ ಕುತೂಹಲ ಇದೆ . ಅಲ್ಲಾ ,ನಿಮಗೆ ಅನ್ಸಿಲ್ವೇನ್ರಿ?
ಇದ್ಯಾವ್ದೋ ತಲೆ ಹರಟೆ ಜೊತೆ ಇಷ್ಟ್ ದಿನದಿಂದ  ಮಾತಾಡ್ತಾ ಇದ್ದೀನಿ . ಒಂದ್ಸಲ  ಪ್ರಾಣಿ ಹೇಗಿದೆ ಅಂತ ನೋಡ್ಬೇಕು ಅಂತ?  ನಂಗೆ  ಫೋಟೋ ಎಲ್ಲ ಕೇಳೋದು ಕೊಡೋದ್ ಇಷ್ಟ ಇಲ್ಲ . ಮೊದಲು ಏನಿದ್ರೂ ಮುಖತಃ ಭೇಟಿ . ಉಳಿದಿದ್ದು  ಆಮೇಲೆ  ನೋಡ್ಕೊಳೋಣ  !

ಒಮ್ಮೆಲೇ ಅವಳು ಮೌನವಾದಳು .  ಆಗಲೇ  ರಿಯಲೈಸ್ ಆಯಿತು  ಅವನು  ವಾಟ್ಸಪ್ಪ್ ಅಥವಾ ಫೇಸ್ ಬುಕ್ ನಲ್ಲಿ ಒಂದೂ  ಫೋಟೋ ಹಾಕಿರಲಿಲ್ಲ  ಎಂದು !  ನೋಡೋಕ್ ಹೇಗಿರಬಹುದು  ,  ಯಾಕೆ  ಒಂದೂ ಫೋಟೋ  ಹಾಕಿಲ್ಲ ಎಂದು ಅನಿಸಿತ್ತೇನೋ ನಿಜ . ಆದರೆ ....  ಕೇಳೋಕೆ  ಸಂಕೋಚ ಆಗ್ತಿತ್ತು  ಅಂತ ಹೇಳೋದು ಹೇಗೆ ? 

ಕೆಲ ದಿನಗಳ ಮೇಲೆ   ಅವನ ಫೋನ್  ಬಂತು  " ನೆನಪಿದ್ಯೇನ್ರಿ?  ಆವತ್ತು  ಹೇಳಿದ್ದೆ, ಮುಖತಃ  ಭೇಟಿ ಮಾಡಬೇಕು ಒಂದ್ಸಲ ಅಂತ ?   ಒಂದ್ಸಲ  ಮೀಟ್ ಮಾಡೇ ಬಿಡೋಣ !  ನಾಲ್ಕು ದಿನ  ಕೆಲ್ಸದ್ ಮೇಲೆ  ದಿಲ್ಲಿಗೆ ಹೋಗ್ತಾ ಇದ್ದೀನಿ . ಮುಂದಿನ  ಶನಿವಾರ ಫ್ರೀ ಮಾಡ್ಕೊಳಿ.  ಸ್ಟಾರ್ ಬಕ್ಸ್ ಕಾಫಿ  ಓಕೆ ನಾ  ಅಥವಾ ಐಸ್ ಕ್ರೀಮಾ  ಅಂತ  ಡಿಸೈಡ್ ಮಾಡಿ ಹೇಳಿ. 
ಸಿಟಿ ಸೆಂಟರ್  ಮಾಲ್ ನಲ್ಲಿ  ಎರಡೂ ಸಿಗತ್ತೆ . ಸಂಜೆ  ಆರೂವರೆಗೆ  ಅಲ್ಲಿರೋ ಬುಕ್ ಕೆಫೆ  ಹತ್ರ ಕಾಯ್ತಾ ಇರ್ತೀನಿ . ನೀಲಿ ಟಿ ಶರ್ಟ್  ಹಾಕಿರ್ತೀನಿ . ನಿಮಗೆ ಗುರುತು ಹಿಡಿಯೋಕೆ ಸುಲಭ ಆಗ್ಲಿ ಅಂತ  ಹೇಳಿದೆ ಅಷ್ಟೇ .  ಸರಿ ಈಗ  ಹೊರಡಬೇಕು . ಸಿಗಲಾ  ? ಅಂದ ಹಾಗೆ , ಆ  ನೀಲಿ  ಸೀರೆ ಉಟ್ಟು ಬರ್ತೀರಾ ಪ್ಲೀಸ್ ? ನಿಮಗೆ  ತುಂಬಾ ಒಪ್ಪತ್ತೇ ಅದು ! ಬೈ !  "  

ಅವಳು ಮೊಬೈಲ್ ಕೈಲಿ ಹಿಡಿದು  ಗೊಂಬೆಯಂತೆ ಕುಳಿತಿದ್ದಳು . 
ಏನು ಮಾಡಬೇಕೋ ಗೊತ್ತೇ ಆಗ್ತಿರಲಿಲ್ಲ ! 
ಮಳೆ ಸುರಿದಂತೆ , ಎಲ್ಲ ಅವನೇ ಪಟ ಪಟ  ಹೇಳಿ ಮುಗಿಸಿದ್ದ  ಅವಳಿಗೆ ಹೇಳಲು ಏನೂ  ಇರದಂತೆ . 

ಹೋಗಬೇಕೋ ಬೇಡವೋ ಅನ್ನೋದನ್ನ ಅವಳೇ ಡಿಸೈಡ್ ಮಾಡಬೇಕಿತ್ತು. ಶನಿವಾರದ ವರೆಗೂ ಟೈಮ್ ಏನೋ ಇತ್ತು ..ಆದರೂ  ಅವನು ಹೇಗೆ ಕಾಣಿಸ ಬಹುದು ಅಂತ ಕುತೂಹಲ ಇರಲಿಲ್ಲವೇ? ಇಷ್ಟೆಲ್ಲಾ  ಪಟಾಕಿಯಂತೆ ವಟಗುಟ್ಟುವ ಹುಡುಗ ಎದುರಿಗೂ ಹೀಗೆ ಇರುತ್ತಾನಾ ಅಂತ ಅನುಮಾನ ಕಾಡಿರಲಿಲ್ಲವ? ಹರಟೆ ಎಲ್ಲೆಲ್ಲೋ ಹೋಗಿ ಮುಟ್ಟುವಾಗ , ನಿಜಕ್ಕೂ ಈ ಕ್ಷಣ ಇವನನ್ನೊಮ್ಮೆ ನೋಡಲೇ ಬೇಕು  ಅಂತ  ಅನಿಸಿರಲಿಲ್ಲವಾ? 
ಎಲ್ಲವೂ ಇತ್ತು  ..ಆದರೆ ಜೊತೆಗೆ ಒಂಥರಾ ಭಯ ಕೂಡ ಇತ್ತು .  ಅವನ  ತನ್ನನ್ನು ಹೇಗೆ ಕಲ್ಪಿಸಿಕೊಂಡಿದ್ದಾನೋ ?  ಅವನ ಮನಸಲ್ಲಿ ತನ್ನ ಬಗ್ಗೆ ಏನು  ಭಾವನೆಗಳಿವೆಯೋ ?  ಭೇಟಿ ಆದಮೇಲೆ  ನಿರಾಸೆ ಆಗಬಹುದೇ ಅವನಿಗೆ??  ಆ ನಂತರವೂ ಈ ಸ್ನೇಹ ಹೀಗೆ ಇರದೇ ಹೋದರೆ?
ಅದೇಕೋ ಈ ಯೋಚನೆ ಅವಳಿಗೆ  ಇಷ್ಟವಾಗುತ್ತಲೇ ಇರಲಿಲ್ಲ . ಅದ್ಯಾವ ಮಾಯದಲ್ಲೋ ಅವನು ಅವಳ  ಅತೀ ಹತ್ತಿರದವರ ಲಿಸ್ಟ್ ಸೇರಿಕೊಂಡು ಬಿಟ್ಟಿದ್ದ . ಅವನು ದೂರವಾಗುವುದು  ಅವಳು ಎಂದೂ ಬಯಸದ ವಿಷಯ . 
 ಒಟ್ಟಿನಲ್ಲಿ ತಲೆ ಕಲಸು ಮೇಲೋಗರವಾಗಿ  ಬೇರೇನೂ ತೋಚದಂತಾಗುತ್ತಿತ್ತು. 


ಈ ವಿಷಯದಲ್ಲಿ  ಯಾರನ್ನು ಸಲಹೆ ಕೇಳುವುದೂ ಸಾಧ್ಯವಿರಲಿಲ್ಲ .  'ಅವನು'  ತಾನು  ಯಾರಲ್ಲೂ ಹಂಚಿಕೊಳ್ಳದಂಥಾ  ಗುಟ್ಟಾಗಿದ್ದ .   ಏನಂದು ಕೊಳ್ಳುತ್ತಾರೆ ಯಾರಾದ್ರೂ ?  ಇವಳಿಗೇನು ಬಂತಪ್ಪಾ  ಅನ್ನೋಲ್ವೇ?
ಆದರೆ , ನೀರಸವಾಗಿ , ಅರ್ಥವಿಲ್ಲದೆ  ಸಾಗುತ್ತಿರುವ ತನ್ನ ಜೀವನದಲ್ಲಿ ಸ್ವಲ್ಪ ಆದ್ರೂ  ನಗು  ತುಂಬಿದವನು ಇವನು ಅಂತ  ಯಾರಿಗೂ ಗೊತ್ತಿಲ್ಲ .ಅದನ್ನ ತಾನು ಹೇಳಿದರೆ  ಏನೆಲ್ಲಾ ಮಾತುಗಳು ಬರಬಹುದು ಎಂದು ಯೋಚಿಸಿಯೇ  ಬೆವರಿದ್ದಳು . 

ಅವನ ಮಾತುಗಳಲ್ಲಿ ಕೆಲವು ಸಲ ತನ್ನ ಕೆನ್ನೆ ಕೆಂಪೇರಿಸುವ ತುಂಟತನ  ಇಣುಕುವುದನ್ನು  ಇತ್ತೀಚೆ ಗಮನಿಸಿದ್ದಳು . 
ಒಮ್ಮೊಮ್ಮೆ ಕಸಿವಿಸಿ ಆದರೂ  ಹಾಗೆಲ್ಲಾ ಹೇಳ ಬೇಡವೆನ್ನುವ , ಬೈಯುವ ಮನಸಾಗುತ್ತಿರಲಿಲ್ಲ ಎನ್ನುವುದು  ಅರಿವಿಗೆ ಬಂದಾಗ   ಗಾಬರಿಯಾಗಿದ್ದಳು .  ಎಲ್ಲಿ ಮುಟ್ಟಬಹುದು ಇದು ಎಂಬ ಯೋಚನೆ . 

ಎರಡು ನಿದ್ರೆಯಿಲ್ಲದ ರಾತ್ರಿಗಳನ್ನು , ಕಳೆದ ಮೇಲೆ , ಕೊನೆಗೊಮ್ಮೆ ಅವನನ್ನು ಭೇಟಿ ಆಗುವುದೇ  ಒಳ್ಳೆಯದು ಎಂದು ತೀರ್ಮಾನಿಸಿದ ಅಂತೂ ನಿದ್ರೆ ಮಾಡಿದಳು . ಬೆಳಗಾದ ಮೇಲೂ ಅವನು ಅವಳ  ತಲೆಯಲ್ಲಿ ಸುತ್ತುತ್ತಲೇ ಇದ್ದ .  ಅಂಥಾ ಸಂದರ್ಭ ಬಂದರೆ  " ನೋಡು , ನನ್ನ ಲೈಫ್ ಲ್ಲಿ  ಏನೇನೋ ಆಗಿ ಹೋಗಿದೆ . ಯಾವ ಸಂಬಂಧಗಳ ಬಗ್ಗೆಯೂ  ನಂಬಿಕೆ ಇಲ್ಲದ  ಸ್ಥಿತಿ ಗೆ ಬಂದಿದ್ದೇನೆ . ಯಾರನ್ನೂ  ಜೀವನದಲ್ಲಿ  ಇನ್ನು ಹಚ್ಚಿ ಕೊಳ್ಳಬಾರದು ಅಂತ  ತೀರ್ಮಾನ ಮಾಡಿದೀನಿ . ಆದರೂ ನೀನು ಹೇಗೆ  ಹತ್ತಿರ ಆಗ್ಬಿಟ್ಟೆ ಅಂತ  ಗೊತ್ತಿಲ್ಲ . ನೋಡು , ಇದು ಸ್ನೇಹ ಅಂತಾದ್ರೆ , ಇಷ್ಟರಲ್ಲೇ ಇರಲಿ . ಇನ್ನೂ ಹತ್ತಿರ ಆಗಬೇಕು ಅನ್ನೋ  ವಿಚಾರ ಎಲ್ಲ ಇದ್ರೆ ,  ಅಲ್ಲಿಗೆ ಬಿಟ್ಟು ಬಿಡೋದು ಒಳ್ಳೇದು  . ಇಲ್ಲ ಅಂದ್ರೆ , ಖಾಯಂ ಆಗಿ ಮಾತಾಡೋದು ನಿಲ್ಲಿಸಬೇಕಾಗತ್ತೆ . "   ಇದೆಲ್ಲವನ್ನೂ ಯಾವ ಭಾವನೆಯನ್ನೂ  ತೋರಿಸದೆ , ಅವನಿಗೆ ಹೇಳುವ ಬಗೆಯನ್ನು ಯೋಚಿಸುತ್ತಿದ್ದಳು . 
ಶುಕ್ರವಾರ ರಾತ್ರಿ ನಿದ್ರೆಯಿಲ್ಲದೆ ಕಳೆಯಿತು  ! ಶನಿವಾರದ  ಮಧ್ಯಾಹ್ನದವರೆಗೂ  ಮನೆಯಲ್ಲಿ ಕೆಲಸಗಳನ್ನು ಹೇಗೆ ಮುಗಿಸಿದಳೋ ಅವಳಿಗೆ ಗೊತ್ತು . ಸಂಜೆ ೫ ರ ಹೊತ್ತಿಗೆ ರೆಡಿಯಾಗುವಾಗ ಎದೆಯಲ್ಲಿ ವಿಚಿತ್ರ ಭಾವಗಳು ! 
ಕಪಾಟಿನಿಂದ   ಸೀರೆ ತೆಗೆಯುವಾಗ  ಒಮ್ಮೆ ದ್ವಂದ್ವ ! ಅವನು ಹೇಳಿದ ಅಂತ  ತಾನು ಉಡಬೇಕೇ  ಎಂಬ ಪ್ರಶ್ನೆ  ಕಾಡಿದಾಗ  ಕೊನೆಗೆ ಮರೂನ್  ಸೀರೆ ಉಟ್ಟಳು . ಅಂತೂ ತಯಾರಾಗಿ  ಹೊರಡುವ ಮೊದಲು ಕನ್ನಡಿ ನೋಡಿದಾಗ  ಬಿಂಬ ಸುಂದರವಾಗೇ ಕಾಣಿಸಿತು . 

ಸಿಟಿ ಸೆಂಟರ್ ಎದುರು ಟ್ಯಾಕ್ಸಿ ನಿಂತಾಗ 6.45.  ಮೊದಲ ಭೇಟಿಗೆ ಲೇಟ ಆಯ್ತಾ ಅಂದುಕೊಂಡವಳಿಗೆ , 
ಇದು ಕೊನೆಯ ಭೇಟಿಯೂ ಆಗಬಹುದಲ್ವಾ ಎಂಬ  ವಿಚಾರವೂ ತಲೆಯಲ್ಲಿ ಸುಳಿಯಿತು . ಬುಕ್ ಕೆಫೆ ಯ ಎದುರು ನೀಲಿ ಟಿ ಶರ್ಟ್  ಕಂಡಾಗ ಎದೆಬಡಿತ  ಅವಳಿಗೆ ಕೇಳುತ್ತಿತ್ತು. ಅವಳನ್ನು ನೋಡುತ್ತಲೇ   ಅವನ ಮುಖದಲ್ಲಿ ತುಂಬಿದ ನಗು ದೂರದಿಂದಲೇ  ಕಾಣುತ್ತಿತ್ತು . 
" ಸಾರಿ , ಸ್ವಲ್ಪ ಲೇಟ್ ಆಯ್ತು ."
"ಹೊ ಪರವಾಗಿಲ್ಲ ಬಿಡಿ . 10-15 ನಿಮಿಷ ಅಷ್ಟೇ . ನಾನೂ ಲೇಟ ಲತೀಫ್ ಒಂಥರಾ. ಆದರೆ ಇವತ್ತು ನಿಮ್ಮನ್ನು ಮೀಟ್ ಮಾಡ್ಬೇಕಲ್ವಾ ಅಂತ ಟೈಮ್ ಗೆ ಬಂದೆ ಅಷ್ಟೇ . ಫಸ್ಟ್ ಇಂಪ್ರೆಷನ್ ಹಾಳಾಗಬಾರದು ನೋಡಿ ! "  ಮುಕ್ತವಾಗಿ ನಕ್ಕ . ಅವಳ ಟೆನ್ಷನ್ ಕಮ್ಮಿ ಆಯ್ತು .  
ತೀರಾ ಚಂದದವ  ಎನ್ನಲಾಗದಿದ್ದರೂ ಒಂಥರಾ ಆಕರ್ಷಣೆ  ಇತ್ತು ಅವನ  ನಗುವ ಕಣ್ಣಲ್ಲಿ ! 
ಕಾಫಿ ಕುಡೀತಾ ಮಾತಾಡೋಣ್ವ ?  ಅಥವಾ ಐಸ್ ಕ್ರೀಮ್ ?

ಕಾಫೀ ಶಾಪ್ ನ ಮೂಲೆಯ  ಟೇಬಲ್  ನಿಂದ  ಹೊರಗಡೆಯ  ಗಾರ್ಡನ್ ಸುಂದರವಾಗಿ ಕಾಣುತ್ತಿತ್ತು . 
  
"ನೀವು ಬರ್ತಿರೋ ಇಲ್ವೋ ಅಂತ ಅನುಮಾನ ಇತ್ತು . ನಾನೇನೋ ಹೇಳ್ಬಿಟ್ಟೆ ಬನ್ನಿ  ಮೀಟ್ ಮಾಡೋಣ ಅಂತೆಲ್ಲ . ಆದರೆ ನೀವು ಅದನ್ನ ಹೇಗೆ ತೊಗೋತೀರಾ ಅಂತ ಗೊತ್ತಿಲ್ವಲ್ಲ "  

" ಹಾಗೇನಿಲ್ಲ , ಬಟ್  ಒಂದ್ಸಲ ಗೊಂದಲ ಆಯ್ತು ನಂಗೆ " 
"  ಸಹಜ ರೀ . ಇದ್ದಕ್ಕಿದ್ದಂಗೆ  ನಾನು ಬಡ ಬಡಾ ಅಂತ  ಇಲ್ಲಿ ಬನ್ನಿ  ಭೇಟಿ  ಆಗೋಣ ಅದೂ ಇದೂ ಅಂತೆಲ್ಲ ಅಂದ್ರೆ.. ಗಾಬರಿ ಆಗೋದೇ . ಏನಪಾ ಇವನು  ಏನೋ ನಾಲ್ಕು ಮಾತಾಡಿದ್ದೆ ಕಾಫಿ ಗೆ ಕರೀತಾನೆ ಅಂತ ಅಂದ್ಕೊತೀರೇನೋ  ಅನ್ನೋ ಸಂಶಯ  ಬಂತು ನಂಗೆ    ಹ ಹ ಹ ..   "  ನಕ್ಕಾಗ  ಅವನ ಮುಖವನ್ನೇ ನೋಡಿದಳು 
" ಅಂದಹಾಗೆ,  ಪರವಾಗಿಲ್ಲ ಮರೂನ್ ಸೀರೆ ನೂ ಒಪ್ಪತ್ತೆ ರೀ ನಿಮಗೆ! " 
ಚಾಟ್ ಮಾಡುವಾಗಿಂದಕ್ಕೂ ಎದುರಿಗೆ ಮಾತಾಡೋದಕ್ಕೂ ಏನೂ ವ್ಯತ್ಯಾಸ ಇಲ್ಲ ಎನಿಸಿತು ಅವಳಿಗೆ . 
" ಯಾಕ್ರೀ ? ಮಾತಾಡ್ತಿಲ್ಲ?  ಕೋಪ ಬಂತಾ? ಅಷ್ಟು ಆರಾಮಾಗಿ  ಚಾಟ್ ಮಾಡ್ತೀರಿ  ಎದುರಿಗೆ ಯಾಕ್ರೀ ಮೌನಗೌರಿ ?  "
"ಹಾಗೇನಿಲ್ಲ , ಏನು ಮಾತಾಡ ಬೇಕು ಅಂತ ಗೊತ್ತಾಗ್ತಿಲ್ಲ " 
" ಕರ್ಮಾ !  ಹ ಹ ಹ  ..  ಒಂದ್ ಮಾತ್ ಹೇಳಲಾ ? ಏನು ಗೊತ್ತ ? ನೀವು  ಫೋಟೋದಲ್ಲಿ ಹೇಗೆ ಕಾಣಿಸ್ತೀರೋ  ನಿಜಕ್ಕೂ ಹಾಗೆ ಇದ್ದೀರಾ ! " 
" ಅರೆ ? ಅದರಲ್ಲೇನ್   ಆಶ್ಚರ್ಯ ? ನಂದೇ  ತಾನೇ ಫೋಟೋ? ಮತ್ತೆ, ನಾನು ಹೇಗಿದೀನೋ ಹಾಗೆ ಬರತ್ತೆ ! " 
"ಆ ತರ ಅಲ್ಲಾ ರೀ , ತುಂಬಾ ಜನ ಚೆನ್ನಾಗಿ ಬಂದಿರೋ ಫೋಟೋಗಳನ್ನ ಮಾತ್ರ ಹಾಕ್ತಾರೆ , ಅಥವಾ ಹಳೆ ಫೋಟೋಗಳನ್ನ ಹಾಕ್ತಾರೆ  ಅಥ್ವಾ ತಿದ್ದಿ ತೀಡಿ ಚೆನ್ನಾಗಿ  ಕಾಣಿಸೋ ತರಾ ಮಾಡಿ ಹಾಕ್ತಾರೆ . ಆದ್ರೆ , ನಿಮ್ಮ ಫೋಟೋಕ್ಕೂ ನೀವು ನಿಜವಾಗಿ ಇರೋದಕ್ಕೂ ವ್ಯತ್ಯಾಸ ಇಲ್ಲ ಅಂತ ಹೇಳಿದ್ದು " 
" ಹ ಹ್ ಹಾ , ನಾನ್ಯಾಕೆ ತಿದ್ದಿ ತೀಡಿ ಹಾಕ್ಕೋಬೇಕು ಫೋಟೋ ನ ?  ನಾನೇನು ಗಂಡು ಹುಡುಕ್ತಿಲ್ವಲ್ಲ  ?  "  ಹೇಳಿದವಳು ನಾಲಿಗೆ ಕಚ್ಚಿಕೊಂಡಳು 
" ಅಂತೂ ಈಗ ಸಲ್ಪ ಆನ್ಲೈನ್ ಲೆವೆಲ್ ಗೆ ಬರ್ತಿದೀರಾ "  ಮತ್ತೊಮ್ಮೆ ನಕ್ಕ ಅವನು ! 
ಅದು ಹೇಗೆ ಅಷ್ಟು ಕೂಲಾಗಿದಾನೆ  ತಾನೇ ಏನೋ ಕಲ್ಪಿಸಿಕೊಂಡು  ಸುಮ್ಮನೆ ಟೆನ್ಷನ್ ತೊಗೊಂಡೆ  ಎನಿಸಿ ನಿರಾಳ ವಾದಳು 
ಹರಟೆ  ಮುಂದುವರಿಯಿತು . 
ಎರಡು ಕಾಫಿ ಆದಮೇಲೆ , ಅವನು ಸ್ವಲ್ಪ ಸೀರಿಯಸ್  ಆದ. 
" ನಿಮ್ಮತ್ರ  ಒಂದು ವಿಷಯ ಮಾತಾಡ್ಬೇಕು . ಆದರೆ ನೀವು ಹೇಗೆ ರೆಸ್ಪೋನ್ಡ್ ಮಾಡ್ತೀರಾ ಅಂತ ಗೊತ್ತಿಲ್ಲ . "
ಅವಳು  ಉಸಿರು ಬಿಗಿ ಹಿಡಿದಳು . ಇಷ್ಟೊತ್ತು  ಆರಾಮಾಗಿದ್ದ ವಾತಾವರಣ  ಒಮ್ಮೆಲೇ ಬದಲಾದಂತೆನಿಸಿತು . 

" ನೋಡಿ , ತುಂಬಾ ದಿನದಿಂದ  ತಲೇಲಿ  ವಿಚಾರಗಳು ಬರ್ತಿದ್ವು .. .  ನಾವಿಬ್ರೂ ಇಷ್ಟು ದಿನದಿಂದ  ಹರಟೆ ಹೊಡಿತೀವಿ , ಒಬ್ಬರನ್ನೊಬ್ಬರು ನೋಡದೇನೆ  , ಆದರೂ ಏನೋ ಆತ್ಮೀಯತೆ, ಸ್ನೇಹ ಸಲುಗೆ  ,ನಿಮ್ಮನ್ನ  ಒಂದ್ಸಲ  ನೋಡಬೇಕು ,ಭೇಟಿ ಆಗಬೇಕು   ಅಂತ  ಒಮ್ಮೆಲೇ ಅನಿಸೋಕೆ ಶುರುವಾಯ್ತು .   
ನಿಮ್ಮ ಬಗೆಗಿನ ನನ್ನ ಫೀಲಿಂಗ್ಸ್ ಬಗ್ಗೆ  ನಂಗೆ  ಅನುಮಾನ ಬರೋಕ್ ಶುರುವಾಯ್ತು.  ಅದಕ್ಕೆ , ಒಂದ್ಸಲ ಎದುರು ಬದುರು ಕೂತು ಮಾತಾಡಿದ್ರೆ  ಬಹುಶಃ ಕ್ಲಿಯರ್ ಆಗಬಹುದು ಅನಿಸ್ತು . ಅದಕ್ಕೆ  ಕರೆದಿದ್ದು . ಯಾವುದೇ  ಆಗಲಿ ನನ್ನ ತಲೇಲಿ ಕೊರೆಯೋಕೆ ಶುರುವಾದ್ರೆ ,  ಆದಷ್ಟು ಬೇಗ ಕ್ಲಿಯರ್ ಮಾಡ್ಕೊಳೋದು ನನ್ನ ಸ್ವಭಾವ . . ದಯವಿಟ್ಟು ತಪ್ಪು ತಿಳ್ಕೊಬೇಡಿ " 

ಏನು ಹೇಳಬೇಕೋ ಅವಳಿಗೆ  ಗೊತ್ತಾಗಲಿಲ್ಲ ., ತನಗನಿಸಿದ್ದು ನಿಜವಾಯ್ತಾ ಅನ್ನೋ  ಭಯ ಕಾಡೋಕೆ ಶುರುವಾಯ್ತು .  ತನ್ನದಲ್ಲದ ಸ್ವರದಲ್ಲಿ ಕೇಳಿದಳು 
" ಸೊ, ಈಗ  ಏನನಿಸ್ತಿದೆ ನಿಮಗೆ ? " 
ಅವನು  ಟೇಬಲ್ ನಲ್ಲಿ ಸ್ವಲ್ಪ ಮುಂದೆ ಬಾಗಿ ಅವಳ ಕಣ್ಣಲ್ಲಿ ಕಣ್ಣಿಟ್ಟು  ಮೆಲ್ಲಗೆ  ಹೇಳಿದ 
" ಏನಿಲ್ಲ . ಇನ್ನೂ ಒಂದ್ ಕಪ್  ಅಟ್ ಲೀಸ್ಟ್  ಬೈ - ಟು   ಕಾಫಿ  ಕುಡಿಬಹುದೇನೋ  ಅನಿಸ್ತಿದೆ ! "   ಜೋರಾಗಿ ನಕ್ಕವನನ್ನು ಕೊಂದು  ಹಾಕುವಷ್ಟು ಕೋಪ ಬಂತು ಅವಳಿಗೆ ! 
 ಅವನೇನು  ಹೇಳ್ತಾನೋ ಅಂತ ತನ್ನ  ಬಿ ಪಿ ಏರ್ತಾ ಇದ್ರೆ  ಇವನು ಕಾಫೀ  ಅಂತಿದಾನಲ್ಲ ! 

" ಹ ಹ ಹಾ .. ಸಾರಿ ಕಣ್ರೀ. ಕೋಪ ಮಾಡ್ಕೋಬೇಡಿ .  ನಿಮ್ಮಲ್ಲಿ ಒಬ್ಬ ಒಳ್ಳೆ ಸ್ನೇಹಿತೆ  ಕಾಣಿಸ್ತಿದಾಳೆ  ನಂಗೆ . ನಿಮ್ಮ ಹತ್ರ  ಏನು ಬೇಕಾದರೂ ಹಂಚಿಕೊಳ್ಳೋ ಸಲುಗೆ ಇದೆ . ತುಂಟತನ  ಮಾಡಬಹುದು , ವಾದ ಮಾಡಬಹುದು , ಜಗಳ ಕೂಡ ಮಾಡಬಹುದು !  ಆಗೆಲ್ಲಾ ನೀವು  ಸಿಟ್ಟು ಮಾಡ್ಕೋತೀರಾ , ಬೈತೀರಾ ,ಸರಿ ತಪ್ಪುಗಳ ಬಗ್ಗೆ ಚರ್ಚೆ ಮಾಡ್ತೀರಾ   ಆದರೆ  ನನ್ನ ಜಡ್ಜ್ ಮಾಡೋಲ್ಲ ,  ಅನ್ನೋ ವಿಶ್ವಾಸ ಇದೆ .  ಈ ಸ್ನೇಹಾನಾ ಹೀಗೆ  ಜೀವನ ಪರ್ಯಂತ ಇಟಗೋಬೇಕು ಅನ್ನೋ ಆಸೆ ಇದೇರಿ .  ಸ್ನೇಹ  ಪ್ರೀತಿಯ ರೂಪ  ಪಡೆದ  ಕೂಡಲೇ ಅದನ್ನ  ಕಳ್ಕೊಳೋ ಚಾನ್ಸ್ ಜಾಸ್ತಿ  ಅಂತ ನನ್ನ ನಂಬಿಕೆ . ನಮ್ಮ  ಎಕ್ಸ್ಪೆಕ್ಟೇಷನ್ಸ್  ಹೆಚ್ಚಾಗೋಕೆ ಶುರುವಾಗತ್ತೆ  ,  ಅದಕ್ಕೆ , ಸ್ನೇಹಾನೂ ಪ್ರೀತಿನೂ  ಮಿಕ್ಸ್ ಮಾಡದೇ ಬೇರೆ ಬೇರೇನೇ  ಇಟ್ಕೋಳೋದು ಒಳ್ಳೇದು ಅನ್ಸತ್ತೆ ನಂಗೆ . ನೀವೇನಂತೀರಾ?  ನೀವೇನೂ ನನ್ನ ಬಗ್ಗೆ  ಪ್ರೀತಿ ಪ್ರೇಮ  ಅಂತೆಲ್ಲ ಕನಸು ಕಟ್ಟಿಲ್ಲ ತಾನೇ ? " 

ಅವಳ ಮುಖ ಕೆಂಪಾಯ್ತು !  ತಾನು  ಹೇಗೆ ಹೇಳಬೇಕಪ್ಪಾ  ಎಂದು ಯೋಚನೆ ಮಾಡಲೂ  ಕಷ್ಟ ಪಡುತ್ತಿದ್ದ ವಿಷಯನಾ ಅವನು ಇಷ್ಟು ಸುಲಭವಾಗಿ  ಸರಳವಾಗಿ ಹೇಳಿದ ಬಗ್ಗೆ ಅಸೂಯೆ ಆಯ್ತು 
" ಹೋಗ್ರೀ, ನಾನ್ಯಾಕೆ  ಹಾಗೆಲ್ಲ ಕನಸು  ಕಾಣಬೇಕು ? ಹೋಗಿ ಹೋಗಿ ನಿಮ್ಮನ್ನ  ಲವ್ ಮಾಡೋ  ಸ್ಟುಪಿಡ್ ಅಲ್ಲ ನಾನು ! ಇನ್ ಫ್ಯಾಕ್ಟ್ , ನೀವು ಆ ವಿಷಯ ಎತ್ತಿದ್ರ್ , ಹೇಗಪ್ಪಾ ತಪ್ಪಿಸಿಕೊಳ್ಳೋದು, ಏನು ಉತ್ತರ ಕೊಡೋದು ಅಂತ ತಲೆಬಿಸಿ ಮಾಡ್ಕೊಂಡಿದ್ದೆ  ಅಷ್ಟೇ "  ಅಂತ ನಾಲಿಗೆ ಚಾಚಿದಳು . 

" ಸೊ ? ಡೀಲ್ ?  ನಾವಿಬ್ರೂ ಹೀಗೆ  ಬೈಕೊಂಡು, ಜಗಳ ಆಡಿಕೊಂಡು ಸ್ನೇಹಿತರಾಗೇ ಇರೋಣ . ಏನಂತೀರಾ?  "
ಜೊತೆಗೂಡಿದ ನಗುವಿನಲ್ಲಿ ಮುಕ್ತ ವಿಶ್ವಾಸವಿತ್ತು ! 
February 4, 2017

ಅತ್ತೆ !


"ಅಮ್ಮಾ, ನಿಂಗೆ ಗೊತ್ತಿಲ್ಲದೇ ಇರೋ ವಿಷಯದಲ್ಲಿ  ಯಾಕೆ ತಲೆ ಹಾಕ್ತೀಯಾ? "  ಶೇಖರ  ಲ್ಯಾಪ್ ಟಾಪ್ಇಂದ  ತಲೆ ಎತ್ತದೇ ಹೇಳಿ ಬಿಟ್ಟ !
"ಯಾವಾಗ್ಲೂ ಹೀಗೆ . ನಂಗೇನೂ ಗೊತ್ತಿಲ್ಲ  ದಡ್ಡಿ ಅಂತಾನೆ ಎಲ್ಲರೂ ಅಂದ್ಕೊಂಡಿರೋದು .ನಂಗೂ ಗೊತ್ತಾಗತ್ತೆ .  ಆದರೆ ಯಾವತ್ತಾದ್ರೂ  ನನಗೂ ವಿಷಯಗಳನ್ನ  , ಏನ್ ನಡೀತಿದೆ , ಏನಿಲ್ಲ  ಅನ್ನೋದನ್ನ ಹೇಳ್ಬೇಕು. ತಿಳಿಸಕೊಡಬೇಕು ಅಂತ ಒಬ್ರಾದ್ರೂ ಇಲ್ಲಿವರೆಗೆ  ಯೋಚಿಸಿದ್ರಾ?  ನಿಮ್ಮ ಮಾತು, ಚರ್ಚೆ, ಹರಟೆಲ್ಲಿ  ನನ್ನ ಸೇರಿಸಿಕೊಂಡಿರಾ? ನಾನು  ಏನಾದ್ರೂ ಕೇಳಿದಾಗ , ನಿಂಗೆ ಗೊತ್ತಾಗಲ್ಲ ಸುಮ್ನೆ ಇರು ಅನ್ನೋದು ಬಿಟ್ಟು , ಇದು ಹೀಗೆ , ಹೀಗೆ  ಅಂತ ಅರ್ಥ ಮಾಡಿಸಿ ಕೊಟ್ಟರಾ  ....  ಗೌರಕ್ಕನ ಗಂಟಲು ಕಟ್ಟಿತು . 

ಜಗುಲಿಯಲ್ಲಿ ಒಮ್ಮೆಲೇ ನಿಶ್ಶಬ್ದ . ಕುಳಿತವರೆಲ್ಲ  ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುತ್ತಿದ್ದರು .
 
"ತಪ್ಪು ಯಾರು ಮಾಡಲ್ಲ?  ನಾನು ಮಾಡ್ತೀನಿ , ನೀವುಗಳೂ ಮಾಡ್ತೀರಾ. ಆದರೆ  ಎತ್ತಿ ಆಡೋದು , ತಮಾಷೆ ಮಾಡಿ ನಗೋದು ನನ್ನ ತಪ್ಪನ್ನ .  ನಾನು ಅಪರೂಪಕ್ಕೆ ಏನೋ ತಪ್ಪಿ ಬಿಟ್ರೂ .. ಅದು ವರ್ಷ ಇಡೀ ನಗೋಕೆ , ಹೀಯಾಳಿಸೋಕೆ ಆಗತ್ತೆ. ನೀವು ಪದೇ ಪದೇ ಮಾಡಿದ್ರೂ  " ಅದೇನೋ ಅಪ್ಪಿ ತಪ್ಪಿ ಆಗೋಯ್ತು . ಏನು ಮಾಡೋಕಾಗತ್ತೆ . ಬೇಕು ಅಂತ ಮಾಡಿರೋದ ? " ಅಂತ  ಆಗತ್ತೆ !  ಯಾಕೆ ಹಾಗೆ ?"  ಗೌರಕ್ಕನ ಪ್ರಶ್ನೆಗೆ ಉತ್ತರ ಕೊಡುವವರು ಯಾರು ಎಂಬ ನೋಟ ಅತ್ತಿತ್ತ ಹರಿದಾಡಿತು . 

" ನಾನು ಓದಿಲ್ಲದೆ  ಇರಬಹುದು , ನಿಮ್ಮಷ್ಟೆಲ್ಲ ಪ್ರಪಂಚ ಜ್ಞಾನ ಇಲ್ಲದಿರಬಹುದು . ಆದರೂ  ಎಂಥ ಕಷ್ಟದ ಪರಿಸ್ಥಿತಿಲೂ, ನಿಮಗೆಲ್ಲಾ ಕಷ್ಟದ ಬಿಸಿ  ತಿಳಿಯದಂತೆ   ಜೀವನ ನಡೆಸಿಕೊಂಡು ಹೋದ ಅನುಭವ ನಂಗಿದೆ . ಅದಕ್ಕಾದರೂ ಬೆಲೆ ಕೊಡಬಹುದಿತ್ತು .... 

ಸುಮಾ ಮೆಲ್ಲಗೆ ಅತ್ತೆಯ  ಬಳಿ ಸರಿದು  ಭುಜ ಬಳಸಿದಳು . " ಆ ತರಾ ಎಲ್ಲ ನಿಮ್ಮನ್ನ ಕಡೆಗಾಣಿಸ್ತಾರೆ ಅಂದ್ಕೊ ಬೇಡಿ ಅತ್ತೆ ..  " 

"ಹ್ಮ್ , ಅಂದ್ಕೊಳೋದೇನೂ ಬಂತಮ್ಮಾ? ಅದೇ ಸತ್ಯ . ನನ್ನ ಸಮಾಧಾನ ಮಾಡೋಕೆ ಬರ್ಬೇಡ .  ಇಷ್ಟು ವರ್ಷದಿಂದ  ಮನಸಲ್ಲಿ  ನೋವೆಲ್ಲಾ ಒತ್ತಿಟ್ಟು  ,  ಸಾಕಾಗೋಗಿದೆ ನಂಗೆ. ಇನ್ನು ಸಹಿಸೋದು ಸಾಧ್ಯ ಇಲ್ಲ . ನನ್ನ ಜಾಗದಲ್ಲಿ  ನೀವುಗಳ್ಯಾರೇ ಇದ್ರೂ  ಯಾವಾಗ್ಲೋ  ಗಂಡ ನ್ನ, ಮನೆನಾ ಬಿಟ್ಟು ಹೋಗ್ತಿದ್ರೇನೊ  !  ನಮ್ಮ ಕಾಲದಲ್ಲಿ ಅದೆಲ್ಲ ಸಾಧ್ಯ ಇರ್ಲಿಲ್ಲ ನೋಡು . ಹೀಗಾಗಿ ಅನುಭವಿಸೋದೇ ಗತಿ ಆಯ್ತು !  ಚಿಕ್ಕ ಚಿಕ್ಕ ವಿಷಯಕ್ಕೂ ಗಂಡನ್ನ , ಮನೆ ಹಿರಿಯವರನ್ನಾ ಕೇಳ್ಬೇಕು . ನಾನಾಗಿ ನಾನೇ  ಒಂದು  ಚಿಕ್ಕ ನಿರ್ಧಾರಾನೂ ತೊಗೊಳೋ ಹಾಗಿತ್ತ ? 
ನನ್ನ ಇಷ್ಟಾನಿಷ್ಟನ  ಯಾರಾದ್ರೂ  ಯಾಕೆ,  ಕಟ್ಟಿಕೊಂಡ ಗಂಡ ಆದ್ರೂ ಕೇಳಿದ್ರಾ ? ಮನೇಲಿ ನಾಯಿ ಬೆಕ್ಕು ದನ ಇರತ್ತಲ್ಲ , ಹಾಗೆ ಹೆಂಡತಿ ನು ಅನ್ನೋ ಭಾವ . ಯಾಕಮ್ಮ ಹಾಗೆ? ನಾನು ಮನುಷ್ಯಳಲ್ವಾ? ನಂಗು ಒಂದು ಮನಸ್ಸು- ಆಸೆ ಅಂತ ಇರಲ್ವಾ?  ೬೦ ವರ್ಷ ಆಯ್ತು ಮದ್ವೆ ಆಗಿ .  ಇಷ್ಟ್ ವರ್ಷದಲ್ಲಿ ಅವರೇ ಆಗಿ ಒಂದೇ ಒಂದು ಸಲ ಹೆಂಡತಿಗೆ ಅಂತ ಸೀರೆ ತಗೊಂಡು ಬಂದ್ರಾ ನಿಮ್ ಮಾವ? ಕೇಳು ?   ಬಸುರಿ ಆಗಿದ್ದಾಗ  ಒಂದ್ಸಲ ತುಂಬಾ ಆಸೆ ಆಗ್ತಿದೆ ಒಂದು ಹಸಿರು ಸೀರೆ ತಂದ್ಕೊಡಿ ಅಂತ  ಕೇಳಿದ್ದಕ್ಕೆ ಅದೇನೆಲ್ಲ ಕೇಳ್ಬೇಕಾಯ್ತು ಗೊತ್ತಾ ? "


ಸೊಸೆ ಮೆಲ್ಲಗೆ ಮಾವನ ಮುಖ ನೋಡಿದಳು . ಅಲ್ಲಿ ಕಸಿವಿಸಿ -ಕೋಪಗಳ ಸಮ್ಮಿಶ್ರ ಭಾವ ಕಾಣಿಸಿತು .  
"ಅದೇನ್ ನಾನೊಬ್ಬನೇನಾ   ಹಾಗೆ ಮಾಡ್ತಿದಿದ್ದು ? ಆಗಿನ ಕಾಲದಲ್ಲಿ  ಆ ತರಾ  ಯಾರು ತಂದ್ಕೊಡ್ತ ಇದ್ರೂ ? ಒಟ್ಟು ಕುಟುಂಬದಲ್ಲಿ  ಮನೆ ಹಿರಿಯರೇ ಎಲ್ಲರಿಗೂ  ತರ್ತಿದಿದ್ದು. ಇವಳಿ ಗೆ ಅಂತ ನಾನೇನು ಹೊಸದಾಗಿ ಶುರು ಮಾಡ್ಬೇಕಿತ್ತಾ? "  ಗೋಪಾಲಣ್ಣ  ಸಿಡುಕಿದರು . 

"ನೋಡಿ, ಮನಸಿದಿದ್ರೆ  ಎಲ್ಲವೂ ಆಗ್ತಾ ಇತ್ತು.  ನಿಮ್ಮಣ್ಣ  ತಂದು ಕೊಡ್ತಾ ಇರಲಿಲ್ವಾ ಹೆಂಡತಿ ಮಕ್ಕಳಿಗೆ ? ಇದೊಂದು  ಉದಾಹರಣೆ ಅಷ್ಟೇ . ಅದೆಷ್ಟೋ  ಈ ತರಾ ವಿಷಯಗಳಿವೆ , ಚಿಕ್ಕ ಪುಟ್ಟದೆ ಅನಿಸ ಬಹುದು . ಆದರೆ , ಮನಸಿಗೆ  ಚುಚ್ಚ್ತಾ ಇರೋಕೆ  ಅಷ್ಟು ಸಾಕು . ಇವರು  ವ್ಯಾಪಾರ-ವ್ಯವಹಾರ ಅಂತ  ಊರೂರು ಅಲೀತ ಇದ್ರೂ . ಮನೇಲಿ ನಾನು ಒಂಥರಾ ಕೆಲಸದವಳಾಗಿದ್ದೆ . ಎಲ್ಲರಿಂದ  ಅದು ಇದು ಕೇಳಿಸ್ಕೊಂಡು , ಮಕ್ಕಳ ಬೆಳವಣಿಗೆ, ವಿದ್ಯಾಭ್ಯಾಸ ಇದೆಲ್ಲದರ ತಲೆಬಿಸಿ  ಇವರಿಗೆ ತಾಗದಂತೆ  ಸಂಸಾರ ತೂಗಿಸ್ಕೊಂಡು ಹೋಗೋದ್ರೊಳಗೆ , ಪ್ರಪಂಚದಲ್ಲಿ ಏನಾಗ್ತಿದೆ ಇಲ್ಲ  ಅಂತ ತಿಳ್ಕೊಳೋ ಪುರಸೊತ್ತು ಇತ್ತ ನಂಗೆ? ಮನೆಗೆ ಬಂದಾಗೆಲ್ಲ , ಅವರಿವರ ಬಗ್ಗೆ ದೂರು ಹೇಳದೆ ಇವರ  ಇಷ್ಟಗಳನ್ನ ಮಾತ್ರ ನೋಡ್ಕೊತಿದ್ನಲ್ಲ  ಅದರ ಬಗ್ಗೆ ಯಾಕಮ್ಮಾ ಮಾತಾಡೋಲ್ಲ? 

ಏಳನೇ ಕ್ಲಾಸ್ ಮುಗೀತಿದ್ದಾನ್ಗೆ  ಸಾಕು ಓದಿದ್ದು ಅಂತ ಮದ್ವೆ ಮಾಡಿದ ನಮ್ಮಪ್ಪ . ಮುಂದೆ ಓದಬೇಕು ಅನ್ನೋ ಆಸೆನೆಲ್ಲ  ಅಲ್ಲೇ ಒಲೆಗೆ ಹಾಕಿ ಬಂದೆ .  ಮನೇಲಿ ಇಬ್ಬರು ಹಿರಿಯ ವಾರಗಿತ್ತೀರಿಗೆ  ನಾನು ಅವರಿಗಿಂತ ಜಾಸ್ತಿ ಓದಿದೀನಿ ಅಂತ  ಸಂಕಟ , ಆಮೇಲೆ ಬಂದ ಇಬ್ಬರಿಗೆ ಅವರು ಜಾಸ್ತಿ ಓದ್ಕೊಂಡಿರೋ ಹಮ್ಮು .  ಇವರ ನಡುವೆ ಸಿಕ್ಕೊಂಡಿದ್ದು ನಾನು . ನಂದೇನಿತ್ತು ತಪ್ಪು ?  ಕೆಲಸ ಮುಗ್ಸಿ  ಪೇಪರ್ ಓದೋಣ ಅಂತ  ಕೈಲಿ ಹಿಡಿದ್ರೆ , ಚುಚ್ಚು ಮಾತುಗಳು . ಅಂತೂ ನನ್ನ ಪ್ರಪಂಚ ಜ್ಞಾನ  ಆಚೀಚೆ ಮನೆಗಿಂತ ಮುಂದೆ ಹೋಗಲೇ ಇಲ್ಲ ನೋಡು . 

ಮಕ್ಕಳು ದೊಡ್ಡೋರಾದ್ರು , ನಿಮ್ಮಾವ  ಒಂದು ಕಡೆ ನೆಲೆ ಆದರು .  ನಮ್ಮದೇ ಅಂತ ಬೇರೆ  ಮನೆ ಆಯ್ತು .ಆವಾಗಾದ್ರು ನನ್ನ  ಮನೆಯ ಸದಸ್ಯೆ ಅಂತ  ನೋಡಬಹುದಿತ್ತು. ಉಹುಂ . ಅಷ್ಟೊತ್ತಿಗೆ , " ಅಮ್ಮಂಗೆ ಏನೂ ಗೊತ್ತಾಗಲ್ಲ " ಅಂತ  ಅಭಿಪ್ರಾಯ  ಗಟ್ಟಿ ಆಗೋಗಿತ್ತಲ್ಲ ? ಮಕ್ಕಳಾದ್ರೂ  ಅಮ್ಮ , ಬಾ ಇಲ್ಲಿ , ಇದು ಹೀಗೆ , ಇದು ಹೀಗೆ  ಅಂತ ಹೇಳ್ಕೊಡ ಬಹುದಿತ್ತು . ಮಾಡಲಿಲ್ಲ . ಮೊಬೈಲ್ ಬಂತು . ಅದನ್ನ ಹೇಗೆ  ಬಳಸೋದು ಅಂತ  ಕೇಳಿದ್ದಕ್ಕೆ  ನಿಂಗ್ಯಾಕೆ ಬಿಡಮ್ಮ ಅಂತ ನಕ್ಕು ಬಿಟ್ಟರು .  ಕಂಪ್ಯೂಟರ್  ಬಗ್ಗೆ ಕುತೂಹಲ ದಿಂದ  ಕೇಳಿದ್ದಕ್ಕೆ , " ಅಮ್ಮ  ಇನ್ನು ಕಂಪ್ಯೂಟರ್ ಇಂಜಿನೀಯರ್ ಆಗೋ ತರಾ ಕಾಣಿಸ್ತಿದೆ " ಅಂತ ತಮಾಷೆ ಮಾಡಿದ್ರು . ಟಿ ವಿ ಲಿ ವಾರ್ತೆ ನೋಡೋವಾಗ ರಾಜಕೀಯದ  ಸುದ್ದಿ ನೋಡಿ  ಆ ಬಗ್ಗೆ ಕೇಳಿದ್ದಕ್ಕೆ , ನಿಮ್ಮಾವ  ,'ಅದೇನು  ತಿಳಕೊಂಡು ನಿಂಗೇನು ಚುನಾವಣೆಗೆ ಹೋಗೋಕಿದ್ಯಾ' ಅಂತ ವ್ಯಂಗ್ಯ ಮಾಡಿದ್ರು. 

ಅಲ್ಲಾ , ಗೊತ್ತಾಗ್ದೇ ಇರೋದನ್ನ ತಿಳ್ಕೋ ಬೇಕು , ನಮ್ಮ ಜ್ಞಾನ ನ  ಜಾಸ್ತಿ ಮಾಡ್ಕೋಬೇಕು ಅಂತ ಆಸೆಪಡೋದು ತಪ್ಪೇನಮ್ಮಾ ?  ಅದೇನೂ  ಹೇಳದೆ , ಆಮೇಲೆ  ನಿಂಗೇನು ಬರಲ್ಲ , ಗೊತ್ತಾಗಲ್ಲ ' ಅನ್ನೋದು ಸರೀನಾ?  ಸುರಿಯುತ್ತಿದ್ದ ಕಣ್ಣೀರನ್ನು   ಸೆರಗಲ್ಲಿ  ಒರೆಸುವ ಪ್ರಯತ್ನದಲ್ಲಿದ್ದ  ಅತ್ತೆಯನ್ನು  ಸಮಾಧಾನ ಮಾಡುವುದೋ  ಅಥವಾ ಎದೆಯಲ್ಲಿ ಉರಿಯುತ್ತಿದ್ದುದನ್ನೆಲ್ಲ ಹೇಳಿಕೊಂಡು  ಹಗುರಾಗಲಿ ಎಂದು ಸುಮ್ಮನಿರುವುದೋ ತಿಳಿಯದೆ ಸುಮಾ  ಗಂಡನ  ಮುಖ ನೋಡುತ್ತಾ  ಅಲ್ಲೇ ನಿಂತುಬಿಟ್ಟಳು !

November 30, 2016

ಪ್ರಶ್ನೆ !!

       ತಲೆ ಬಿಸಿ ಅಗ್ತಾ ಇತ್ತು ಅವನಿಗೆ .  ಒಂದ್ಕಡೆ  ಕೆಲಸದ ಟೆನ್ಷನ್  . ಮತ್ತೊಂದು ಕಡೆ   ಮೂರು ದಿನದಿಂದ ಅವಳ  ಪತ್ತೆ ಇಲ್ಲ . ಕಾಲ್ / ಮೆಸೇಜ್ ಯಾವದಕ್ಕೂ ಉತ್ತರ ಇಲ್ಲ .  ಅದ್ಯಾವ್ದೋ  ಮೂಡ್ನಲ್ಲಿ  ಏನೋ ಅಂದಿದ್ದಕ್ಕೆ ಇಷ್ಟು ಸಿಟ್ಟು ಮಾಡ್ಕೊಳೋ ಅಗತ್ಯ ಇದಯಾ ಅಂತ   ಮನಸಲ್ಲೇ ಬೈಕೋತಾ ಇದ್ದಾಗಲೇ ಫೋನ್ ರಿಂಗಣಿಸಿತು.  

 ಸ್ಕ್ರೀನ್ ಮೇಲೆ ಅವಳ ಹೆಸರು, ನಗು ಮುಖ ಮಿಂಚಿತು ! 
ಧಡಕ್ಕೆಂದು  ಫೋನ್ ಎತ್ತಿ  " ಎಲ್ಲಿದೀಯ ನೀನು ? ಕಾಲ್ ಯಾಕೆ ತೊಗೊತಾ ಇಲ್ಲ .... " 
ಇನ್ನೇನೋ ಬಡ ಬಡಿಸುವ ಮೊದಲೇ  ಆ ಕಡೆ ಯಿಂದ  " ಹಲೋ ... " ಎಂದ  ಹೆಣ್ಣು ಧ್ವನಿ ಬೇರೆ ಆಗಿದ್ದು ಕೇಳಿ  ಅಲ್ಲೇ ನಿಲ್ಲಿಸಿದ . 
" ಹಲೋ , ನಿಮ್ಮ ನಂಬರ್ ನಿಂದ  ತುಂಬಾ ಮಿಸ್ ಕಾಲ್ ಇದ್ವು ಅಂತ   ಈಗ ಫೋನ್ ಮಾಡ್ತಾ ಇದ್ದೀನಿ ." 
" ಸಾರಿ,   ನನ್  ಫ್ರೆಂಡ್ ಗೆ ಕಾಲ್ ಮಾಡ್ತಾ ಇದ್ದೆ , ಏನೋ ಮಿಸ್ಟೇಕ್ ಆಗಿ ನಿಮಗೆ ಹೋಗ್ತಾ ಇರ್ಬೇಕು .  ವೆರಿ ಸಾರಿ .. " ಅವನ ದನಿಯಲ್ಲಿ  ನಿರಾಶೆ  ತುಳುಕಿತು . ಆ ಕಡೆಯಿಂದ ಸಣ್ಣ ಮೌನ .  ಫೋನ್ ಕಟ್ ಮಾಡಬೇಕು ಅನ್ನೋ ಅಷ್ಟರಲ್ಲಿ  ಕೇಳಿತು 
" ಹೌದು ಇದು ಅಂಜಲಿ ದೇ ನಂಬರ್ . ಆದರೆ ..ಅವಳು ... ಮೊನ್ನೆ ಶುಕ್ರವಾರ  ಹಾರ್ಟ್ ಅಟ್ಯಾಕ್ ಆಗಿ ......  " ನಂತರ ಕೇಳಿದ್ದು ಬಿಕ್ಕಿದ ಶಬ್ದ ಮಾತ್ರ . 

ಅವನ ಕೈಯಿಂದ ಫೋನ್ ಜಾರ ತೊಡಗಿತು . 
ತಾನು  ಕೇಳಿದ್ದು  ಇನ್ನೂ ಜೀರ್ಣಿಸಲಾಗುತ್ತಿಲ್ಲ  .. ಇದು ಹಾರ್ಟ್ ಅಟ್ಯಾಕ್ ಆಗೋ ವಯಸ್ಸಾ ? 

ಒಂದು ಬಾರಿ ಚುಡಾಯಿಸಿದ್ದಳು  ಅವಳು "  ಕಳ್ಳ ಕಣೋ ನೀನು , ನನ್ನ ಒಳ್ಳೆ  ಹಾರ್ಟ್ ನ ಕದ್ದು ನಿನ್ ಹತ್ರ ಇಟಗೊಂಡು ನಿನ್ ಡಬ್ಬಾ ಹಾರ್ಟ್  ನಂಗೆ  ಕೊಟ್ಟಿದೀಯ ಕಣೋ .  " 

ಅವನ ತಲೆಯಲ್ಲಿ  ಈಗ  ಒಂದೇ ಪ್ರಶ್ನೆ !   ಅವಳು ಹೇಳಿದಂತೆ , ತನ್ನ ಹೃದಯ ಅವಳ ಹತ್ತಿರ ಇದ್ದರೆ,  ಈಗ ಸತ್ತಿದ್ದು  ತಾನೊ ? ಅವಳೋ ? 

August 17, 2016

ರಾಖೀನೀನು  ಇವತ್ತು ನನ್ನ ಹುಡುಕ್ತಿಯಾ  ಅಂತ ಗೊತ್ತು . ಅದಕ್ಕೆ ನಾನು  ಕಾಲೇಜಿಗೆ ಬಂದಿಲ್ಲ . 
ನಿನ್ನ ಮೆಸೇಜ್ ಗೆ  ಕಾಯ್ತಾ ಇದ್ದೆ . ಅದಕ್ಕೆ  ಬರೆದಿಟ್ಟಿದ್ದರೂ  ಇಮೇಲ್ ನಾ  ಕಳಿಸಿರಲಿಲ್ಲ . ಅಂದ್ಕೊಂಡ ಹಾಗೆ  ಮೆಸೇಜ್ ಬರಲಿಲ್ಲ ಅಂದ್ರೆ ಆಶ್ಚರ್ಯ ಆಗ್ತಿತ್ತು .   ಜೊತೆಗೆ ಸ್ವಲ್ಪ ಖುಷಿನೂ ! 

 ಈಗ ವಿಷಯಕ್ಕೆ ಬರೋಣ . 
ನೀನು  ನಂಗೆ ತುಂಬಾ ಇಷ್ಟವಾಗ್ತೀಯ . ಇದನ್ನ ಮೊದಲು ಕೂಡ  ನಿಂಗೆ ಹೇಳಿದೀನಿ .ಯಾಕೆ  ಇಷ್ಟ ಅಂತ ಕೇಳಿದರೆ  ಅದರ ಉತ್ತರ ನಂಗೊತ್ತಿಲ್ಲ .  ತುಂಬಾ ಚೆನಾಗಿದೀಯ  ಅಥ್ವಾ ತುಂಬಾ ಬುದ್ಧಿವಂತೆ ಅಂತಲ್ಲ .  ಅದೇನೋ ನೀನು  ಎದುರು ಬಂದಾಗ , ಹತ್ತಿರ  ಇರೋವಾಗ,  ಮನಸ್ಸು ಖುಷಿಯಾಗಿರತ್ತೆ . ಒಂಥರಾ ಉತ್ಸಾಹ !  ಇದನ್ನ  ಪ್ರೀತಿ ಅಂತ ಅಂದ್ಕೊಳೋದಾದ್ರೆ  ... ಹಾಗೆ ಸರಿ ! 
ಒಟ್ನಲ್ಲಿ  ನಂಗೆ ಇಷ್ಟವಾಗ್ತೀಯ ಅನ್ನೋದಂತೂ ನಿಜ. ಇದು ನನ್ನ ಭಾವನೆ ಮಾತ್ರ. ನಿನಗೂ ನನ್ನ ಬಗ್ಗೆ  ಆ ತರ ಅನಿಸಬೇಕು ಅಂತೇನಿಲ್ಲ . ಅನಿಸಿದರೆ , ನಿಂಗೆ ನನ್ನ ಬಗ್ಗೆ ಮಧುರ ಭಾವನೆಗಳು ಮೂಡಿದರೆ ನನಗೆ ಖುಷಿ . ಹಾಗೇನಾದ್ರು ಆದ್ರೆ  ನಿನ್ನನ್ನ ನನ್ನಿಂದ  ಎಷ್ಟು ಸಾಧ್ಯನೋ ಅಷ್ಟು  ಪ್ರೀತಿಯಿಂದ ನೋಡ್ಕೋತೀನಿ ಅಂತ ಹೇಳಬಲ್ಲೆ . ಇವೆಲ್ಲ ಒಂಥರಾ ಕನಸು ಬಿಡು . ಇರಲಿ . 
ನಿಂಗೆ ನಾನು ಇಷ್ಟವಾಗದಿದ್ದರೂ ನನಗೇನು ಬೇಜಾರಿಲ್ಲ . ಒಂದು ಮಾತು ನೆನಪಿಡು .  ಪ್ರೀತ್ಸೇ ಪ್ರೀತ್ಸೇ ಅಂತ  ಹಿಂದೆ  ಬೀಳೋದಾಗ್ಲಿ , ನೀನು   ಐ ಲವ್ ಯೂ ಅಂದಿಲ್ಲ ಅಂತ ದೇವದಾಸ್ ಆಗೋದಾಗ್ಲಿ ಎಲ್ಲ ನಾನು ಮಾಡೋನಲ್ಲ . 

ನನಗನಿಸಿದ್ದನ್ನ  ಮುಚ್ಚಿಡದೇ ನಿಂಗೆ ಹೇಳಿದ್ನಲ್ಲ  ಆಗ   ಕನ್ಫ್ಯೂಶನ್  , ಕೋಪ , ಆಶ್ಚರ್ಯ , ಗಾಬರಿ  .. ಈ ಎಲ್ಲ ಭಾವಗಳ ಮಿಶ್ರಣ  ನಿನ್ನ ಮುಖದಲ್ಲಿ ಕಂಡಿತ್ತು ನಂಗೆ . ಏನೂ ಹೇಳದೆ  ಥಟ್ ಅಂತ ಎದ್ದು ಹೋದ್ಯಲ್ಲ ಆಗ್ಲೇ ಅಂದ್ಕೊಂಡೆ  ಇದ್ಯಾಕೋ ಸರಿ ಹೋಗಿಲ್ಲ ಅಂತ . ಆದ್ರೂ  , ಧೈರ್ಯವಾಗಿ ಹೇಳಿದ್ನಲ್ಲ  ನೀನು ಇಷ್ಟ ನಂಗೆ ಅಂತ  ಅದರಿಂದ ಮನಸಿನ ಭಾರ ಎಷ್ಟೋ ಇಳಿದಂತೆ ಅನಿಸಿತ್ತು .  ಆವತ್ತಿಂದ ನೀನು ನನ್ನ  ತಪ್ಪಿಸಿ ಓಡಾಡ್ತಾ ಇದ್ದೆ . ಅದು ಸರಿ ಹೋಗಲಿಲ್ಲ ನಂಗೆ. ಅದಕ್ಕೆ ಆವತ್ತು  ಕ್ಯಾಂಟೀನಲ್ಲಿ ಹೇಳಿದ್ದು .. ನೋಡು  ನನಗನಿಸಿದ್ದು ನಾನು ಹೇಳಿದೀನಿ ಅಷ್ಟೇ . ಅದರಲ್ಲಿ ನಿಂಗೆ ಒತ್ತಾಯ ಇಲ್ಲ.  ನೀನು ಈ ತರ , ಕಣ್ಣು ತಪ್ಪಿಸಿ ಓಡಾಡೋ ಅಗತ್ಯ ಇಲ್ಲ . ನಿಂಗೆ ನನ್ನಿಂದ ಯಾವ ತೊಂದರೇನು ಇಲ್ಲ.  ಒಂದು ಒಳ್ಳೇ ಸ್ನೇಹ  ನಮ್ಮಲ್ಲಿ ಯಾವಾಗಲು ಇರಬಹುದಲ್ವಾ  ? ಅಂತ .  ಅದರ ನಂತರ .. ಮತ್ತೆ ಪರಿಸ್ಥಿತಿ  ನಿಧಾನವಾಗಿ  ನಾರ್ಮಲ್ ಆಯ್ತು  ಬಿಡು . ಸುಮಾರು ತಿಂಗಳೇ ಕಳೆದು ಹೋಗಿವೆ  ಇದೆಲ್ಲ ಆಗಿ . 
ನಾನೇನೋ ಅಲ್ಲಿಗೆ ಬಿಟ್ಟು ಬಿಟ್ಟೆ . ಆದರೆ ನಿನ್ನ ಮನಸಲ್ಲಿ ಅದು ಇನ್ನು ಕೊರಿತಾ ಇದೆ ಅನ್ನೋದು  ತೀರಾ ಇತ್ತೀಚೆ ಗೊತಾಯ್ತು . ನಿನ್ನ  ಫ್ರೆಂಡ್ಸ್ ಹತ್ರ  ಹೇಳಿದ್ಯಂತೆ    ಇಷ್ಟ  ಆಗ್ತೀಯ , ಪ್ರೀತಿ ಮಾಡ್ತೀನಿ ಅಂತೆಲ್ಲ ಹೇಳೋರಿದಾರೆ . ಅವ್ರಿಗೆ ಈ ಸಲ ರಾಖಿ ಕಟ್ಟಿ  ಬಾಯಿ ಮುಚ್ಚಿಸ್ತೀನಿ ಅಂತ .
ಅದು ನನಗೋಸ್ಕರ ಹೇಳಿದ್ದು ಅಂತ ನಂಗೆ ಅರ್ಥ ಆಗೋಯ್ತು . ಅದಕ್ಕೆ ಬಂದಿಲ್ಲ ಇವತ್ತು .   ಆ ಮಾತು ನಂಗೆ ಸಂಬಂಧಿಸಿದ್ದು ಅಂತ ಗ್ಯಾರಂಟೀ  ಆದ್ರೆ , ನೀನೂ ಹುಡುಕ್ತಿಯ , ಅಟ್ ಲೀಸ್ಟ್  ಮೆಸ್ಸೇಜ್ ಮಾಡಿ ಕೇಳ್ತೀಯ . ಹಾಗೆ ಮೆಸೇಜ್ ಬಂದ್ರೆ , ಇಮೇಲ್ ಕಳಿಸೋಣ ಇಲ್ಲ ಅಂದ್ರೆ  ಎಂದಿನಂತೆ ಇದ್ದರಾಯ್ತು ಅಂತ  ಅಂದ್ಕೊಂಡೆ. ನನ್ನ ಊಹೆ  ಸುಳ್ಳಾಗಲಿಲ್ಲ . 

ಅಲ್ಲಾ ಕಣೆ , ಅದೆಷ್ಟ ಸಲ ಹೇಳಿದೀನಿ , ನಾನು ಕೇವಲ ನನಗನಿಸಿದ್ದನ್ನ ನಿನ್ನತ್ರ ಹೇಳ್ಕೊಂಡಿದೀನಿ ಹೊರತು , ನಿನಗೆ  ಒತ್ತಾಯ ಮಾಡಿಲ್ಲ . ನಿನ್ಗನಿಸಿದ್ದನ್ನ ಹೇಳ್ಕೊಳೋ  ಹಕ್ಕು ನಿನಗಿದೆ . ಆದ್ರೆ ಅದನ್ನ ನಂಗೆ ಡೈರೆಕ್ಟ್ ಆಗಿ ಹೇಳು  ಅಂತ . 
ಈಗ ನೀನು ರಾಖೀ ಕಟ್ಟಿದ ತಕ್ಷಣ  ನಂಗೆ ನಿನ್ನ ಮೇಲಿರೋ ಭಾವನೆ  ಬದಲಾಗಿ ಬಿಡತ್ತೆ ಅಂದ್ಕೊತೀಯ?  ಅದೇನು  ಸಿನೆಮಾ ನಾ?   " ಇವತ್ತಿಂದ ನೀನೆನಿದ್ರೂ ನನ್ ತಂಗಿ ತರ. ನೀನು ಯಾವತ್ತಿದ್ದರೂ  XYZ   ಗೆ ಸೇರಬೇಕಾದೊಳು . ದಯವಿಟ್ಟು ನನ್ನ ಕ್ಷಮಿಸು " ಅಂತೆಲ್ಲ  ಹೇಳ್ತಿನಿ ಅಂದ್ಕೊಂಡ್ಯಾ ? 
ತಪ್ಪು ಕಣೆ .  ಹಾಗೆಲ್ಲ ರಾಖಿ ಕಟ್ಟಿದ  ತಕ್ಷಣ , ಕೆನ್ನೆಗೆ ಬಾರಿಸಿದ ತಕ್ಷಣ  ಬದಲಾಗೋ ಹಾಗಿದ್ರೆ .. ಅದು ಪ್ರೀತಿನೆ ಅಲ್ಲ .  ಅದು ಟೆಂಪರರಿ  ಮೋಹ  ಅಷ್ಟೇ  ! ನಾನು ನಿನ್ನ ಪ್ರೀತಿಸ್ತೀನಿ  ನೀನೂ ನನ್ನ ಪ್ರೀತಿಸಲೇ ಬೇಕು ಅಂತ  ಒತ್ತಾಯ ಮಾಡೋದು, ಹಿಂದೆ ಬೀಳೋದು  ಇದೆಲ್ಲ  ಒಬ್ಸೆಶನ್ . 
ನಾನು ಇದೆರಡು ಕ್ಯಾಟಗರಿ ಗೂ ಸೇರಿಲ್ಲ . ಅನಿಸಿದ್ದನ್ನ ಹೇಳ್ಕೊಂಡು  ಫ್ರೀ ಅಗಿಬಿಡೋದು ನನ್ನ ಸ್ವಭಾವ . 
ಈಗ ನಿಂಗೆ ನಾನು ಹೇಳೋದು ಇಷ್ಟೇ .   ನೀನು ನಂಗಿಷ್ಟ ಅಂದಿದ್ದನ್ನೇ  ನೆವ ಮಾಡಿ ನಾನು ಕೆಟ್ಟೋನು , ಪೋಲಿ ಹುಡ್ಗ ಅಂತ ಡಿಸೈಡ್ ಮಾಡಬೇಡ.  ರಾಖೀ ಕಟ್ಟಿ ಸುಧಾರಿಸ್ತೀನಿ ಇವನ್ನ  ಅಂತನೂ ಅಂದ್ಕೊಬೇಡ . ನಿಂಗೆ  ನಾನು ಒಬ್ಬ ಸಾದಾ ಸ್ನೇಹಿತ ಆಗಿ ಕೂಡ ಬೇಡ  ಅಂತ ಅನಿಸಿದರೆ , ನಂಗೆ ಅದನ್ನ ಸೀದಾ ಹೇಳು.  ಪರವಾಗಿಲ್ಲ. ನಾನೇನು ಆತ್ಮಹತ್ಯೆ ಮಾಡ್ಕೊಳಲ್ಲ. ಆದರೆ ಅದರಿಂದ ನಂಗೆ ನಿನ್ನ ಬಗ್ಗೆ ಇರೋ ಭಾವನೆಗಳು ಬದಲಾಗತ್ತೆ ಅಂತ ತಪ್ಪು ಕಲ್ಪನೆ ಮಾಡ್ಕೋಬೇಡ .   ನಿನ್ನ ಮದ್ವೆ ಆದ್ಮೇಲೂ , ನನ್ನ ಮದ್ವೆ ಆದ್ಮೇಲೂ  ನನ್ನ ಮನಸಲ್ಲಿ , ಮೊದಲ ಪ್ರೀತಿಯ ನೆನಪಾಗಿ  ಭದ್ರವಾಗಿ ಇಟ್ಟಿರ್ತೀನಿ ಈ ಮಧುರ ಭಾವಗಳನ್ನ .  ಅದು ಬದಲಾಗೋದಿಲ್ಲ 

ಮುಗಿಸೋ ಮುಂಚೆ ಇನ್ನೊಂದ್ ಸಾರಿ ಹೇಳ್ತೀನಿ ಕೇಳು .. ನೀನೇನಾದ್ರೂ  ಮನಸ್ಸು ಬದಲಾಯಿಸಿದರೆ , ನಿನ್ನ ಜೀವನದಲ್ಲಿ ನಂಗೆ ಒಂದು ಜಾಗ ಕೊಡ್ತೀಯಾ ಅಂತಾದ್ರೆ ,ಸಂಕೋಚ ಇಲ್ಲದೆ ನಂಗೆ  ಹೇಳು  ನಿಂಗೆ ಯಾವತ್ತೂ , ಯಾವುದೇ  ಕಂಪ್ಲೈಂಟ್ ಗೆ ಅವಕಾಶ ಮಾಡ್ಕೊಳದೆ ಇರೋ ಅಷ್ಟು   ಪ್ರೀತಿಯಿಂದ ನೋಡ್ಕೋತೀನಿ ಅಂತ ಮಾತ್ರ  ಪ್ರಾಮಿಸ್ ಮಾಡಬಲ್ಲೆ !

  ---- ಇತಿ
      ಪ್ರೀತಿಯ ಅಂತೂ ಅಲ್ಲ , ಸ್ನೇಹಿತ ಅನ್ನಬಹುದೋ ಇಲ್ವೋ ಗೊತ್ತಿಲ್ಲ  
      ನಿಂಗೆ ಗೊತ್ತು  ಯಾರು ಅಂತ  ಹಾಗಾಗಿ ಹೆಸರು ಹಾಕಲ್ಲ ! 
 

May 23, 2015

ಸೀತಾಪಹರಣ ಭಾಗ ೩

ಇಬ್ರೂ ಗಾಬರಿಯಿಂದ ಬೇಗ ಬೇಗ ಮನೆ ಹತ್ರ ಬಂದ್ರು. ಆದರೆ ಅಲ್ಲಿ ಸೀತೆ ಇರಲೇ ಇಲ್ಲ.......  ಅಜ್ಜಿ , ಈಗೇನ್ ಮಾಡಿದ್ರು ರಾಮ -ಲಕ್ಷ್ಮಣ?  ಅಲ್ಲಿ ಕಾಡಲ್ಲಿ ಪೊಲೀಸ್ ಸ್ಟೇಶನ್  ಇತ್ತ? ಕಂಪ್ಲೈಂಟ್ ಕೊಡೋಕೆ?
ಹುಡ್ಕೋದ್ ಹೇಗೆ ?  

ಅಜ್ಜಿ ಅಜ್ಜಿ, ಸೀತೆ ಹತ್ರ ಮೊಬೈಲ್ ಇರ್ಲಿಲ್ವಾ ?  ಅಪೂರ್ವಾ ಳ ಪ್ರಶ್ನೆ 

ಅಯ್ಯೋ , ಆಗ ಫೋನ್ ಕೂಡ ಇರ್ಲಿಲ್ಲ ಕಣೆ  ಇನ್ನು ಮೊಬೈಲ್ ಅಂತೆ  ಗೂಬೆ !  ಅಣ್ಣ ತಂಗಿಯ ತಲೆ ಮೇಲೊಂದು ಮೊಟಕಿದ . 

ಅಮ್ಮಾ .. ನೋಡು ಅಣ್ಣ ನಂಗೆ  ಗೂಬೆ ಅಂತಾನೆ .. ಅವ್ನೆ ಕೋತಿ !  ಅಪೂರ್ವಾಳ ರಾಗ ಶುರುವಾಗುವ ಲಕ್ಷಣ ಕಂಡು ಅಜ್ಜಿ ನಡುವೆ ಗದರಿದರು . 

ಈಗೇನ್ ಕತೆ ಕೇಳ್ತೀರಾ ಇಲ್ಲ ಕಿತ್ತಾಡ್ತೀರ? 

ಸಾರಿ ಅಜ್ಜಿ ,  ನೀನ್ ಹೇಳು . 

ಹ್ಮಂ.. ಆಗೆಲ್ಲ ಪೊಲೀಸ್ ಸ್ಟೇಶನ್ ಎಲ್ಲ ಏನು ಇರ್ಲಿಲ್ಲ . ಅದ್ಕೆ ರಾಮ ಲಕ್ಷ್ಮಣ ಇಬ್ರು ರಾವಣ ಕಾಡಲ್ಲಿ   ಯಾವ ದಿಕ್ಕಿಗೆ ಹೋಗಿರಬಹುದು  ಅಂದಾಜು ಮಾಡ್ಕೊಂಡು  ಹುಡುಕ್ತಾ ಹೊರಟರು . 

"ಅದ್ಕೆ ನೋಡು ಈಗ ಟೆಕ್ನಾಲಜಿ ಇಂದ ಎಷ್ಟು ಉಪಯೋಗ ಆಗಿದೆ ಅಂತ . ಯಾರು ಎಲ್ಲಿದ್ರೂ ಹುಡುಕಬಹುದು"  ವರುಣ್  ಹೇಳಿದ ಅಜ್ಜಿಗೆ . 

'ನಾನು  ನಿಮ್ ಕಾಲದ ಕಥೆ ಹೇಳ್ತಿಲ್ಲ ಸುಮ್ನೆ  ಕೇಳಿ' .  ಅಜ್ಜಿ ಗದರಿದರು . 

"ಸ್ವಲ್ಪ ದೂರ  ಹೋಗೋವಾಗ .. ಅಲ್ಲಿ ಒಂದು ದೊಡ್ಡ ಹಕ್ಕಿ ರೆಕ್ಕೆ ಎಲ್ಲ ಕತ್ತರಿಸ್ಕೊಂಡು ಬಿದ್ದಿತ್ತು  . ಅದನ್ನ ನೋಡಿ ಇವರಿಬ್ರು ಅದಕ್ಕೆ ಸ್ವಲ್ಪ ನೀರು ಕುಡಿಸಿ , ಏನಾಯ್ತು  ಯಾರು ಹೀಂಗೆ ಮಾಡಿದ್ದು ಅಂತ ಕೇಳಿದ್ರು . 
ಅದಕ್ಕೆ ಹಕ್ಕಿ , ಇವರನ್ನ ನೋಡಿ ಅದು  ರಾಮ- ಲಕ್ಷ್ಮಣ  ನೀವೇನಾ ಅಂತ ಕೇಳ್ತು . ಹೌದು ಅಂದಾಗ , ನಾನು ಜಟಾಯು ಅಂತ  , ಸ್ವಲ್ಪ ಹೊತ್ತು ಮುಂಚೆ , ಒಂದು ಚಂದದ ಹೆಂಗಸನ್ನು ರಾವಣ  ಪುಷ್ಪಕ ವಿಮಾನದಲ್ಲಿ ಕರ್ಕೊಂಡು ಹೋದ . ಅವಳು  ರಾಮಾ , ಲಕ್ಷ್ಮಣಾ ಕಾಪಾಡಿ ಅಂತ  ಜೋರಾಗಿ ಕೂಗ್ತಾ ಇದ್ಲು. ಅದಕ್ಕೆ ನಾನು  ಸಹಾಯ ಮಾಡೋಕೆ ಹೋದೆ ಆಗ ರಾವಣ ನನ್ನ  ರೆಕ್ಕೆನೆಲ್ಲ ಕತ್ತರಿಸಿ ಹಾಕ್ಬಿಟ್ಟ"  ಅಂತ ಹೇಳ್ತು. 

"ಅಜ್ಜಿ , ಹಕ್ಕಿಗೆ  ಮಾತಾಡೋಕೆ ಬರ್ತಾ ಇತ್ತ? ಅದಕ್ಕೆ ಹೆಸರು ಯಾರು ಇಟ್ಟಿದ್ರು ? ಯಾರಾದ್ರು ಸಾಕಿ ಕೊಂಡಿದ್ದಾ ಆ ಹಕ್ಕಿ ?"  -ಅಪೂರ್ವಾಳ ಪ್ರಶ್ನಾವಳಿ . 

"ಆಗಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆಲ್ಲ ಮಾತಾಡೋಕೆ ಬರ್ತಿತ್ತು . ಅದಕ್ಕೆ ಹೆಸರು   ಇರ್ತಾ ಇಟ್ಟು . ಅವುಗಳ ಅಪ್ಪ ಅಮ್ಮ ಇಡ್ತಾ ಇದ್ರೂ .  "

"  ಆದರೂ ಜಟಾಯು ಅನ್ನೋ ಹೆಸರು ಚೂರೂ ಚೆನಾಗಿಲ್ಲ ಬಿಡಜ್ಜಿ "

 "ರಾಮ ಲಕ್ಷ್ಮಣ  ಆ ಹಕ್ಕಿ ನ ಕೇಳಿದ್ರು , ಈ ರಾವಣ ಅಂದ್ರೆ ಯಾರು ? ಎಲ್ಲಿರ್ತಾನೆ  ನಿನ್ಗೆನಾದ್ರು ಗೊತ್ತಾ"  ಅಂತ 
 ಅಜ್ಜಿ ಮೊಮ್ಮಕ್ಕಳಿಗೆ ಮಾತಾಡುವ ಅವಕಾಶ ಕೊಡದೆ ಮುಂದುವರಿಸಿದರು . 

"ಜಟಾಯು ಹೇಳ್ತು , ಇಲ್ಲಿಂದ ಸುಮಾರು ದೂರ ಸಮುದ್ರದ ನಡುವೆ  ಒಂದು ತುಂಬಾ ಸುಂದರವಾಗಿರೋ  ಪಟ್ಟಣ ಇದೆ . ಲಂಕಾ ಪಟ್ಟಣ ಅಂತ ಅದರ ರಾಜ ಈ ರಾವಣ.
ಹೀಗೆ ಮುಂದೆ ಹೋದ್ರೆ , ಅಲ್ಲಿ  ಕಿಷ್ಕಿಂಧೆ ಅಂತ ಸಿಗತ್ತೆ  ಅಲ್ಲಿ ರಾಜ ಸುಗ್ರೀವನ್ನ ಭೇಟಿ ಮಾಡಿದ್ರೆ ನಿಮಗೆ ಸಹಾಯ ಸಿಗಬಹುದು"  ಅಂತ ಹೇಳಿ  ಜಟಾಯು ಸತ್ತೋಯ್ತು  . 

"ಪಾಪ ಅಲ್ವ ಅಜ್ಜಿ  ಜಟಾಯು ? ಗುರ್ತೆ ಇಲ್ದೆ ಹೋದ್ರು  ಸಹಾಯ ಮಾಡೋಕೆ ಹೋಗಿ ಸತ್ತೋಯ್ತು  ! "

"ಅದ್ಕೆ ಕಣೆ ಸುಮ್ ಸುಮ್ನೆ ಯಾರಿಗೂ ಹೆಲ್ಪ್ ಮಾಡೋಕ್ ಹೋಗಬಾರದು  ಅನ್ನೋದು !  " ಆದಿತ್ಯ  ತಂಗಿಗೆ  ಹೇಳಿದ . 

ಸುಮ್ಮನೆ  ಕತೆ ಕೇಳ್ತಾ ಇದ್ದ ವರುಣ್  ಕೈ ಮೇಲೆತ್ತಿದ . ಪ್ರಶ್ನೆ ಕೇಳೋಕೆ . 

"ಅಜ್ಜಿ , ರಾವಣ ಲಂಕಾ ಪಟ್ಟಣ ದವನು . ಅಂದ್ರೆ ಬೇರೆ ದೇಶದವನು . ಅವ್ನು ಹೆಂಗೆ   ಪಾಸ್ ಪೋರ್ಟ್ , ವೀಸ  ಇಲ್ದೆ ನೆ ಬಂದ? ವಿಮಾನದಲ್ಲಿ ಬೇರೆ ಬಂದಿದ್ದ ಅಂದ್ರೆ  ಸೆಕ್ಯೂರಿಟಿ  ಫೋರ್ಸ್ ನವರು ಏನು ಮಾಡ್ತಾ ಇದ್ರು ?  ಅವನ ವಿಮಾನ ನ ಯಾಕೆ ಟ್ರ್ಯಾಕ್ ಮಾಡ್ಲಿಲ್ಲ ? "

ಅಜ್ಜಿ ಅವಕ್ಕಾದರು !  

" ಅಯ್ಯೋ ..ಅಂದ್ರೆ ಆವಾಗಿಂದ ಹೀಗೆ  ನಮ್ ಕಥೆ ಅಂತಾಯ್ತು ! ಯಾರು ಯಾವ್ ಬಾರ್ಡರ್ ಇಂದ ಹೇಗ ಬೇಕಾದರೂ ಒಳಗೆ ನುಗ್ಗ ಬಹುದು  ಕಣೋ "  - ಆದಿತ್ಯನ ಸಮಜ್ಹಾಯಿಷಿ . 

ಹೋಗಿ ಹೋಗಿ ನಿಮಗೆ  ರಾಮಾಯಣ ಕಥೆ ಹೇಳೋಕೆ ಶುರು ಮಾಡಿದ್ನಲ್ಲ  ನನ್ ಬುದ್ಧಿ ಗಿಷ್ಟು  ! ಅಜ್ಜಿ ಬೈಕೊಂಡರು. 

"ಮುಂದೆ ಹೇಳು ಅಜ್ಜಿ ನೀನು . ಅವ್ರು ಕಿಷ್ಕಿಂಧೆ ಗೇ ಹೋದ್ರ? "

"ಹಾಂ . ಸುಮಾರು ದೂರ ನಡ್ಕೊಂಡು ಹೋದ ಮೇಲೆ  ಅವರಿಗೆ ಕಿಷ್ಕಿಂಧೆ  ಕಾಣಿಸ್ತು . ಕಿಷ್ಕಿಂಧೆ ಲಿ ಎಲ್ಲ ನಿಮ್ ತರದವ್ರೆ   ಇದ್ದಿದ್ರು  !  ಅದರ ರಾಜ ಸುಗ್ರೀವ ಅಂತ . "

" ಅಜ್ಜಿ , ನಮ್ ತರದವರು ಅಂದ್ರೆ? ಮಕ್ಕಳೇ ಇದ್ರಾ?  "

 "ಹಿ ಹಿ ಹಿ  .. ಇಲ್ಲ ಕಣೆ  ಬರೀ ಕೋತಿಗಳು ಅಂತ ಹೇಳಿದ್ದು "-- ಅಜ್ಜಿ ದೊಡ್ಡದಾಗಿ ನಕ್ಕರು 

ಅಜ್ಜೀ ........... ಮುಖ ತಿರುವಿದಳು ಅಪೂರ್ವ . 

ಅಷ್ಟರಲ್ಲಿ  ಒಳಗಿಂದ ಕರೆ ಬಂತು . ಊಟ ರೆಡಿ ಎಲ್ಲ ಬೇಗ ಬನ್ನಿ ಅಂತ . 

ಮಕ್ಕಳು  ಎದ್ದರು . "ಅಜ್ಜಿ ಬೇಗ ಊಟ ಮಾಡ್ಕೊಂಡ್ ಬರೋಣ . ಮತ್ತೆ ಹೇಳು "

 ನಡೀರಿ ಇವತ್ತಿಗೆ ಸಾಕು ಇಷ್ಟೇ.  ನಂಗೂ ನಿಮಗೆ ಕಥೆ ಹೇಳಿ ಸುಸ್ತಾಗ್ತಿದೆ . 
ನಾಳೆ ಮುಂದಿನ ಕಥೆ